Wednesday, October 30, 2024
spot_img

ಬಿಚ್ಚಿಡುವುದು..ಮುಚ್ಚಿಡುವುದು ಏನನ್ನು

ಬಿಚ್ಚಿಡುವುದಾದರೆ ಮುಚ್ಚಿಡುವುದು ಏನು ಮತ್ತು ಏಕೆ…….

ಮುಡ ಹಗರಣದ ಚರ್ಚೆಯಲ್ಲಿ ಮೂಢರಾದ ಜನಪ್ರತಿನಿಧಿಗಳು…..

ನಿಮ್ಮದು ನಮಗೆ ಎಲ್ಲಾ ಗೊತ್ತು ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳಿದರೆ, ವಿರೋಧ ಪಕ್ಷದವರು ನಿಮ್ಮದೆಲ್ಲಾ ನಮಗೂ ಗೊತ್ತು ನಾವು ಬಿಚ್ಚಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಅಧಿಕೃತವಾಗಿ ವಿಧಾನಮಂಡಲದ ಎರಡೂ ಸದನಗಳ ದಾಖಲೆಗಳಲ್ಲಿ ನಮೂದಾಗಿದೆ…..

ಈಗ ನಿಜಕ್ಕೂ ಆಗಬೇಕಾಗಿರುವುದು ಎಲ್ಲರ ಹಗರಣಗಳನ್ನು ಬಿಚ್ಚಿಡುವುದು. ಈ ಬಿಚ್ಚು ರೂಪದ ಆರೋಪಗಳು ಎಷ್ಟು ಗಂಭೀರ ಎಂಬುದನ್ನು ಯೋಚಿಸಿದರೆ ನಿಜಕ್ಕೂ ಆಕ್ರೋಶ ಉಕ್ಕಿ ಬರುತ್ತದೆ. ಅವರುಗಳ ಬಗ್ಗೆ ಅಸಹ್ಯವಾಗುತ್ತದೆ….

ರಾಜ್ಯದ ಸಂಪನ್ಮೂಲಗಳನ್ನು ನಿಯಂತ್ರಿಸಿ, ಎಲ್ಲ ಪ್ರಜೆಗಳಿಗೂ ನ್ಯಾಯಯುತವಾಗಿ ಹಂಚಿ, ಜನರ ಜೀವನಮಟ್ಟ ಸುಧಾರಣೆಯಾಗಲಿ ಎಂದು ಅಪಾರ ಶ್ರಮ ಮತ್ತು ಹಣ ಖರ್ಚು ಮಾಡಿ 224 + 75 ( ವಿಧಾನ ಪರಿಷತ್ ) ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ನಂತರ ಅವರು ಚರ್ಚೆ ಮಾಡುವುದು ನಿನ್ನದನ್ನು ಬಿಚ್ಚಿಡುತ್ತೇನೆ ಎಂದು ಒಬ್ಬರು, ನಿನ್ನದನ್ನು ಬಿಚ್ಚಿಡುತ್ತೇನೆ ಎಂದು ಇನ್ನೊಬ್ಬರು, ಕೊನೆಗೆ ಇವರು ಸಾರ್ವಜನಿಕರ ಮಾನ ಮರ್ಯಾದೆಯನ್ನೇ ಹರಾಜುಗಿಟ್ಟರು. ತಾವು ಬೆತ್ತಲಾಗುವುದರ ಮೂಲಕ ಸಮಾಜವನ್ನೇ ಬೆಚ್ಚಿಬೀಳಿಸಿದರು….

ಬಿಚ್ಚಿಡುತ್ತೇವೆ ಎಂದರೆ ಅದರ ಹಿಂದೆ ಮುಚ್ಚಿಟ್ಟಿರುವುದು ಸಾಕಷ್ಟಿದೆ ಎಂದರ್ಥವಲ್ಲವೇ. ಆ ಮುಚ್ಚಿಟ್ಟಿರುವುದು ಏನನ್ನು ಮತ್ತು ಅದರಲ್ಲಿ ಎಷ್ಟನ್ನು ಇಬ್ಬರು ಹೊಂದಾಣಿಕೆ ಮಾಡಿಕೊಂಡು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂಬುದು ನಮಗಿರುವ ಆಸಕ್ತಿ….

ಎಷ್ಟು ಧೈರ್ಯ ಇರಬಹುದು ಇವರಿಗೆ ಬಿಚ್ಚಿಡುತ್ತೇವೆ ಎಂದು ಹೇಳಲು, ನಾಚಿಕೆಯಾಗುವುದಿಲ್ಲವೇ. ಎಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಉಳಿಸಿಕೊಂಡು, ಬಿಚ್ಚಿಡುವ ಅಧಿಕಾರ, ಶಕ್ತಿ ಸಾಮರ್ಥ್ಯವಿದ್ದರೂ, ಸುಮ್ಮನೆ ಬಿಚ್ಚಿಡುತ್ತೇವೆ ಎನ್ನುವುದು ಸಾರ್ವಜನಿಕರಿಗೆ ಮಾಡುವ ಅವಮಾನವಲ್ಲವೇ….

ಐದು ವರ್ಷ ಅವರು, ಐದು ವರ್ಷ ಇವರು, ನಾವೇನು ಇವರ ನಾಟಕ ನೋಡುವ ಮೂಕ ಮತ್ತು ಮೂರ್ಖ ಪ್ರೇಕ್ಷಕರೇ. ಹೋಗಲಿ ಇವರೇನೋ ಮುಚ್ಚಿಟ್ಟಿದ್ದಾರೆ. ಆದರೆ ಅದನ್ನು ಬಿಚ್ಚಿಡಬೇಕಾದ ನಿಜವಾದ ಕಾವಲುಗಾರರು ಕಾರ್ಯಾಂಗದ ಅಧಿಕಾರಿಗಳು. ಇವರು ಎಲ್ಲವನ್ನು ಮುಚ್ಚಿಕೊಂಡಿದ್ದಾರೆಯೇ ಅಥವಾ ಬಿಚ್ಚುವ ಧೈರ್ಯವಿಲ್ಲವೇ ಅಥವಾ ಅದರಲ್ಲಿ ಅವರು ಪಾಲದಾರರೇ, ನಮಗೂ ಅನುಮಾನ ಕಾಡುತ್ತದೆ. ಏಕೆಂದರೆ ನಮ್ಮ ತೆರಿಗೆಯ ಹಣದಿಂದಲೇ ಅವರು, ಅವರು ಕುಟುಂಬ ಬದುಕುತ್ತಿರುವುದು. ಅದನ್ನು ಕೇಳುವ ಹಕ್ಕು ನಮಗಿದೆ. ಬಿಚ್ಚಿಡುವುದಿದ್ದರೆ ಬಿಚ್ಚಿಡಿ ಇಲ್ಲವೇ ತೊಲಗಿ. ಅದು ಬಿಟ್ಟು ಹೀಗೆ ಸಾರ್ವಜನಿಕ ನಾಟಕ ನಿಲ್ಲಿಸಿ…..

ಒಬ್ಬರು ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ, ಇನ್ನೊಬ್ಬರು ಮತ್ತೆಲ್ಲಿಗೋ ಪಾದಯಾತ್ರೆ. ಇಲ್ಲಿ ಮಳೆಯ ಒಡೆತಕ್ಕೆ ಸಿಕ್ಕಿ ಅನೇಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ರೋಗರುಜಿನಗಳಿಂದ ಸಾಕಷ್ಟು ಜನ ನರಳುತ್ತಿದ್ದಾರೆ. ಬದುಕಿನಲ್ಲಿ ಎಷ್ಟೋ ಜನ ಪರಿಸ್ಥಿತಿ ಎದುರಿಸಲಾಗದೆ ಹುಟ್ಟಿದ ತಪ್ಪಿಗಾಗಿ ಪರಿತಪಿಸುತ್ತಾ, ನಿರಾಶರಾಗಿ ಸಾಯುವ ಮಾತುಗಳನ್ನ ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏನಿದು ನಿಮ್ಮ ಬಿಚ್ಚಾಟ, ಸಾರ್ವಜನಿಕರು ಒಂದು ಸಣ್ಣ ತಪ್ಪು ಮಾಡಿದರೆ ದಂಡವಿಧಿಸುವಿರಿ,
ಶಿಕ್ಷಿಸುವಿರಿ. ಆದರೆ ನಿಮಗೆ ಮಾತ್ರ ವಿಶೇಷ ನಿಯಮಗಳು. ನೀವು ಅತಿಮಾನುಷರೇ, ದೈವಾಂಶ ಸಂಭೂತರೇ, ಎಲ್ಲ ನಿಯಮಗಳನ್ನು ಮೀರಿದವರೇ, ಹೇಳುವುದು ಮಾತ್ರ ಪ್ರಜೆಗಳೇ ಪ್ರಭುಗಳು ಎಂದು, ಆದರೆ ವಾಸ್ತವದಲ್ಲಿ ಜನಪ್ರತಿನಿಧಿಗಳೇ ಪ್ರಭುಗಳು. ಜನರೆಲ್ಲ ಗುಲಾಮರು, ಜೀತದಾಳುಗಳು…..

ಅದಕ್ಕೆ ಹೇಳುವುದು ಜನ ಜಾಗ್ರತರಾಗದೇ ಇದ್ದರೆ, ತನ್ನ ಕುಟುಂಬವೇ ತನ್ನ ಸರ್ವಸ್ವ, ಅದರ ಯೋಗ ಕ್ಷೇಮವೇ ತನ್ನ ಜೀವನದ ಸಾರ್ಥಕತೆ ಎಂಬ ಸಂಕುಚಿತ ಮನೋಭಾವ ಬೆಳೆಸಿಕೊಂಡ ಯಾವ ಸಮಾಜವು ತನ್ನ ಕುಟುಂಬವನ್ನು ನೆಮ್ಮದಿಯಿಂದ ಇರಿಸಲು ಸಾಧ್ಯವಿಲ್ಲ. ಏಕೆಂದರೆ ಸ್ವಾರ್ಥ ತನ್ನನ್ನೇ ತಾನು ತನಗರಿವಿಲ್ಲದೇ ಕೊಲ್ಲುತ್ತದೆ. ಈಗಿನ ಸಮಾಜದ ಅನೇಕ ಸಮಸ್ಯೆಗಳನ್ನು ನೋಡಿದಾಗ ಇದು ನಿಜ ಎನಿಸುತ್ತದೆ. ಬಹಳಷ್ಟು ಜನರಿಗೆ ಸಾಮಾಜಿಕ ಕಳಕಳಿಯೂ ಇಲ್ಲ, ರಾಜಕೀಯ ಪ್ರಜ್ಞೆಯೂ ಇಲ್ಲ, ವೈಚಾರಿಕ ಮನೋಭಾವವೂ ಇಲ್ಲ, ಪ್ರಶ್ನಿಸುವ ಧೈರ್ಯವೂ ಇಲ್ಲ, ಅಸಲಿಗೆ ಜೀವನೋತ್ಸಾಹವೇ ಇಲ್ಲ. ಅದರ ಲಾಭ ಈ ದುಷ್ಟ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಪಡೆಯುತ್ತಿದ್ದಾರೆ. ಕನಿಷ್ಠ ಸಂಘಟಿತರಾಗುವ ಧೈರ್ಯವಾದರೂ ಮಾಡಿ…..

HDK/DKS…..

ಹಾಗೆಯೇ ಮತ್ತೊಂದು ಈ ಕ್ಷಣದ ಅತಿರೇಕದ ವರ್ತನೆ ಎಂದರೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರದ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ನಡುವಿನ ವೈಯಕ್ತಿಕ ದ್ವೇಷ – ಅಸೂಯೆಗಳು…

ಇಬ್ಬರೂ ಈ ಹೊತ್ತಿನ ಬಲಿಷ್ಠ ರಾಜಕೀಯ ನಾಯಕರು ನಿಜ. ಆದರೆ ಒಂದು ಸಮುದಾಯ ಅಥವಾ ಒಂದು ರಾಜ್ಯ ಅಥವಾ ಒಂದು ಪಕ್ಷ ಇವರ ಸ್ವಂತ ಆಸ್ತಿ ಏನು ಅಲ್ಲ. ಅವರುಗಳು ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಜನರ ಸೇವೆ ಅಷ್ಟೇ ನಮ್ಮ ಮೂಲ ಉದ್ದೇಶ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅದನ್ನು ಹೊರತುಪಡಿಸಿ ಬಾಯಿಗೆ ಬಂದಂತೆ ವೈಯಕ್ತಿಕ ನಿಂದನೆಗಳು, ತೀರಾ ಕೆಳಮಟ್ಟದ ಭಾಷೆಯಲ್ಲಿ ಮಾತನಾಡುವುದು ಇಬ್ಬರಿಗೂ ಶೋಭೆ ತರುವುದಿಲ್ಲ. ಈ ಕೀಳು ಮಟ್ಟದ ಜಗಳವನ್ನು ಮಾಧ್ಯಮಗಳು ವಿಜೃಂಭಿಸುವುದು ಅಷ್ಟೊಂದು ಉತ್ತಮ ನಡೆಯಲ್ಲ…..

ಅವರಿಬ್ಬರಿಗೂ ಎಚ್ಚರಿಕೆ ಕೊಡುವ ಕೆಲಸವನ್ನು ಯಾರಾದರೂ ಮಾಡಲೇಬೇಕಾಗಿದೆ. ಅವರೇನು ರಾಜ್ಯಕ್ಕೆ ಅನಿವಾರ್ಯವೂ ಅಲ್ಲ, ಅಥವಾ ಶಾಶ್ವತ ನಿವಾಸಿಗಳು ಅಲ್ಲ. ಎಲ್ಲರೂ ಕಾಲಚಕ್ರ ಉರುಳಿದಂತೆ ಹಿನ್ನೆಲೆಗೆ ಸರಿಯಲೇಬೇಕು. ತಾವೇ ಇಲ್ಲಿ ಶಾಶ್ವತ ಎಂಬುದಾಗಿ ಒಬ್ಬರಿಗೊಬ್ಬರು ದ್ವೇಷ, ಅಸೂಯೆ, ಕೋಪ, ಸಣ್ಣತನ ಪ್ರದರ್ಶಿಸಿ ಜನರಲ್ಲಿ ಜಿಗುಪ್ಸೆ ಉಂಟು ಮಾಡುತ್ತಿದ್ದಾರೆ. ಇದು ಸಹ ಇವತ್ತಿನ ಪ್ರಮುಖ ವಿಷಯವೇ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!