Saturday, July 27, 2024
spot_img

ಮಂಡ್ಯದಲ್ಲಿ ಅಂದು ಸತ್ತವರ ತಿಥಿ.ಇಂದು ಬದುಕಿದ್ದವರ ತಿಥಿ

ಮಂಡ್ಯದ ನೆಲದ ಕಥೆಯನ್ನು ಆಧಾರಿಸಿಕೊಂಡು ತಿಥಿ ಅಂಥಾ ಒಂದು ಸಿನಿಮಾ ಬಂದಿತ್ತು.ಅದರ ಸರಳ ಹಾಗೂ ನೈಜ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆದಿತ್ತು.ಈಗ ಮಂಡ್ಯದಲ್ಲಿ ಯಾರಾದರೂ ಸತ್ತವರ ಹನ್ನೊಂದನೇ ದಿನಕ್ಕೆ ಕಾರ್ಯ ತಿಥಿ ಭೂಶಾಂತಿ ಕಾರ್ಯಕ್ರಮ ಅಂತಾ ಮಾಡ್ತಾರೆ. ಆ ಕಾರ್ಯಕ್ರಮದಲ್ಲಿ ಸಂಬಂದಿಗಳಿಗೆ ಊರಿನವರಿಗೆ ಊಟ ಹಾಕಿ ಸತ್ತವನ ಬಾಕೀ ತೀರಿಸಲಾಗುತ್ತದೆ.ಮೊದ ಮೊದಲು ವಡೆ ಪಾಯಸಕ್ಕೆ ಸಿಮೀತವಾಗಿದ್ದ ಈ ಕಾರ್ಯ ಉಳ್ಳವರ ಪ್ರತಿಷ್ಟೆ ಡೌಲು ತೋರಿಸುವ ಕಾರ್ಯಕ್ರಮವಾಗಿ ಬದಲಾಗಿದೆ.ಮೊದಮೊದಲು ಆಡಂಬರದ ವಿವಾಹಗಳಿಗೆ ಶರಣಾಗಿದ್ದ ಮಂಡ್ಯದಳ್ಳಿ ಜನಕ್ಕೆ ಕುವೆಂಪುರವರ ಮಂತ್ರ ಮಾಂಗಲ್ಯವನ್ನು ಊರುಊರಿಗೆ ರೈತಸಂಘ ತಲುಪಿಸಿದ ಪರಿಣಾಮ ಸರಳ ವಿವಾಹ ಇಲ್ಲಿ ನೆಮ್ಮದಿ ಮೂಡಿಸಿತ್ತು.ಈಗ ಆಡಂಬರದ ಮದುವೆಗಳಿಗೆ ಬಲಿಯಾದ ಮಂಡ್ಯದಳ್ಳಿ ಜನ ಸಾಲಗಾರರಾಗಿ ಆಸ್ತಿ ಮಾರಿಕೊಂಡು ತಿರುಗುವಾಗ ಈಗ ತಿಥಿ ಸಹ ಮಂಡ್ಯದಳ್ಳಿ‌ ಜನರನ್ನು ಬೀದಿಗೆಳೆದಿದೆ.ರೈತಸಂಘದ ಗುನ್ನಾಯಕನಹಳ್ಳಿ ಮುದ್ದೇಗೌಡರು ತಮ್ಮ ತಾಯಿ ಸಾವಿಗೆ ತಿಥಿ ಬದಲು ತಿಥಿ ಬಿಡಿ ಸಸಿ ನೆಡಿ ಅಂತಾ ತೆಂಗಿನಸಸಿಗಳನ್ನು ರೈತರಿಗೆ ಉಚಿತವಾಗಿ ನೀಡುವ ವಿನೂತನ ಪ್ರಯೋಗ ನಡೆಸಿದ್ದರು.ಈಗ ತಿಥಿ ಬಿಡಿ ಸರಕಾರಿ ಶಾಲೆ ಉಳಿಸಿ ಆರಂಭಿಸಬೇಕಿದೆ.ಇಂತ ಹೊತ್ತಿನಲ್ಲಿ ನಾಡಿನ ಪ್ರಖರ ಚಿಂತಕ ಜಗದೀಶ್ ಕೊಪ್ಪರವರು ಬರೆದಿರುವ ಲೇಖನ ನಿಮ್ಮ ಮುಂದೆ ಇದೆ.ಓದಿ ಪ್ರತಿಕ್ರಿಯಿಸಿ.

ಮಂಡ್ಯ ಜಿಲ್ಲೆಯಲ್ಲಿ ಬದುಕಿರುವವರ ತಿಥಿ ಎಂಬ ಕಾರ್ಯಕ್ರಮ.

ನನ್ನ ನೆಲದ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ ಇರುವ ಹಾಗೆ, ನನಗೆ ಇಲ್ಲಿನ ಜನರ ಹುಚ್ಚುತನ ಮತ್ತು ಆಡಂಬರದ ಬಗ್ಗೆ ಅಪಾರವಾದ ಸಿಟ್ಟಿದೆ. ಇಲ್ಲಿ ನಡೆಯುತ್ತಿರುವ ವಿವಾಹಗಳು ಮತ್ತು ಮೃತರಾದರವರ ವೈಕುಂಠ ಸಮಾರಾಧನೆ ಕ್ರಿಯೆಗಳನ್ನು ನೋಡಿದರೆ ಅಸಹ್ಯ ಮತ್ತು ಸಿಟ್ಟು ಒಟ್ಟಿಗೆ ಮನದಲ್ಲಿ ಉಮ್ಮಳಿಸಿ ಬರುತ್ತವೆ.

ಮೊದಲು ಉತ್ತರ ಕ್ರಿಯಾದಿ ಅಥವಾ ವೈಕುಂಠ ಸಮಾರಾಧನೆ ಕಾರ್ಯದಲ್ಲಿ ಬಂಧು ಬಾಂಧವರರಿಗಾಗಿ ಅತ್ಯಂತ ಸರಳವಾಗಿ ಅನ್ನ, ಸಾಂಬಾರ್ ಮತ್ತು ಒಂದು ವಡೆ ಇವಿಷ್ಟೇ ಭೋಜನವಾಗಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ತಿಥಿ ಕಾರ್ಯಕ್ರಮಕ್ಕಾಗಿ ಐದರಿಂದ ಹತ್ತು ಕುರಿ ಅಥವಾ ಮೇಕೆ ಕಡಿದು ಭರ್ಜರಿ ಮಾಂಸಹಾರಿ ಊಟ ಹಾಕುವ ವ್ಯವಸ್ಥೆಜಾರಿಗೆ ಬಂದಿದೆ. ಸತ್ತವರಿಗೆ ನಮನ ಸಲ್ಲಿಸಲು ಬರುವ ಬಹುತೇಕ ಮಂದಿ ಎಣ್ಣೆ ಹಾಕಿಕೊಂಡು ಬರುವುದು ಮಾಮೂಲಿಯಾಗಿದೆ. ಈ ವ್ಯವಸ್ಥೆಯನ್ನು ನೋಡಿದರೆ, ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸತ್ತವರ ತಿಥಿಯಲ್ಲ, ಬದಲಾಗಿ ಬದುಕಿರುವವರ ತಿಥಿ ಎಂದು ನನಗೆ ಮನದಟ್ಟಾಗಿದೆ. ಈ ಕಾರಣದಿಂದಾಗಿ ಎಷ್ಟೇ ಆತ್ಮೀಯರಾಗಿರಲಿ ಅಥವಾ ಬಂಧುಗಳಾಗಿರಲಿ ನಾನು ಭಾಗವಹಿಸುವುದಿಲ್ಲ ಅದೇ ರೀತಿ ಅದ್ದೂರಿ ವಿವಾಹಗಳಿಗೂ ನಾನು ಭಾಗವಹಿಸುವುದಿಲ್ಲ.

ಮೊನ್ನೆ ನಿಧನಳಾದ ನನ್ನ ತಂಗಿಯ ಉತ್ತರ ಕ್ರಿಯಾದಿ ಕಾರ್ಯಕ್ರಮಕ್ಕೆ ವೆಜಿಟೇಬಲ್ ಬಾತ್, ಮೊಸರನ್ನ ಮತ್ತು ವಡೆ ಇವುಗಳನ್ನಷ್ಟೇ ವ್ಯವಸ್ಥೆ ಮಾಡಬೇಕೆಂದು ತಾಕೀತು ಮಾಡಿ ಬಂದಿದ್ದೆ . ನನ್ನ ಕುಟುಂಬದಲ್ಲಿ ಯಾರೊಬ್ಬರೂ ನನ್ನ ಮಾತನ್ನು ಮೀರುವುದಿಲ್ಲ. ಅದರಂತೆ ಮಾಡಲು ನಿರ್ಧರಿಸಿದ್ದಾರೆ.

ನಾನು ಬದುಕಿನುದ್ದಕ್ಕೂ ಉಪದೇಶ ಮಾಡುತ್ತಾ ಜೀವಿಸಿದ ವ್ಯಕ್ತಿಯಲ್ಲ, ನುಡಿ ಮತ್ತು ನಡೆಗೆ ವೆತ್ಯಾಸ ಇರಬಾರದು ನಂಬಿ ಬದುಕಿದವನು. ಸರಳ ವಿವಾಹದ ಮೂಲಕ ದಾಂಪತ್ಯ ಬದುಕಿಗೆ ಕಾಲಿಟ್ಟೆ. ಎಂದಿಗೂ ಮನೆಯ ಗೃಹಪ್ರವೇಶ, ಮಕ್ಕಳ ಮದುವೆಗೆ ಪುರೋಹಿತರನ್ನು ಆಹ್ವಾನಿಸಲಿಲ್ಲ. ಆರಂಭದಿಂದಲೂ ಮಕ್ಕಳ ಹುಟ್ಟುಹಬ್ಬವನ್ನು ಮೊದಲಿಗೆ ಮಂಡ್ಯ ನಗರದ ಪ್ರೇರಣಾ ಎಂಬ ಅಂಧ ಮತ್ತು ಕುರುಡು ಮಕ್ಕಳ ಶಾಲೆಯಲ್ಲಿ ಆನಂತರ ಧಾರವಾಡದಲ್ಲಿ ಸಮರ್ಥನಾ ಎಂಬ ಅಂಗವಿಕಲರ ಮಕ್ಕಳ ಶಾಲೆಯಲ್ಲಿ ಅವರಿಗೆ ಸಿಹಿ ಊಟ ಹಾಕಿಸಿ ಆಚರಿಸುತ್ತಿದ್ದೆ.

ಮಗನ ವಿವಾಹ ಮತ್ತು ಧಾರವಾಡದ ಮನೆಯ ಗೃಹ ಪ್ರವೇಶದ ಸಂದರ್ಭಧಲ್ಲಿಯೂ ಕೂಡಾ ಧಾರವಾಡದ 150 ಅಂಗವಿಕಲ ಮಕ್ಕಳಿಗೆ ಅತಿಥಿಗಳಿಗೆ ಸಿದ್ಧಪಡಿಸಿದ್ದ ಸಿಹಿ ಊಟದ ಭೋಜನ ವ್ಯವಸ್ಥೆ ಮಾಡಿದ್ದೆ. ನಾನು ಮತ್ತು ನನ್ನ ಪತ್ನಿ ಮಕ್ಕಳಿಗೆ ಏನನ್ನೂಬೋಧಿಸಲಿಲ್ಲ, ಬದಲಾಗಿ ಅವರೆದುರು ಹೇಗೆ ಬದುಕಬೇಕೆಂದು ನಾವು ಜೀವಿಸುತ್ತಾ ತೋರಿಸಿಕೊಟ್ಟೆವು.

ಮಗ ಅಂತರ್ಜಾತಿ ವಿವಾಹವಾದನು. ಮಗಳು ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ವಿವಾಹವಾದಳು ನಾವು ಬದುಕಿದ ಪರಿ ಮಕ್ಕಳಿಗೆ ಮಾರ್ಗದರ್ಶನವಾಯಿತು. ಎಂಟು ವರ್ಷದ ಹಿಂದೆ ನನ್ನಮಗ ಅನನ್ಯ ನಾಗರಹೊಳ್ಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ಅರಣ್ಯಧಾಕಾರಿಯಾಗಿದ್ದನು. ಅವನನ್ನು ನೋಡಲು ಒಮ್ಮೆ ಹೆಗ್ಗಡದೇವನ ಕೋಟೆಗೆ ಹೋದಾಗ, ಹದಿನೈದು ಕಿ.ಮಿ. ದೂರದ ಮೇಟಿಕುಪ್ಪೆಗೆ ನನ್ನನ್ನ ಕರೆತರಲು ಅರಣ್ಯ ಇಲಾಖೆಯ ವಾಹನವನ್ನು ಕಳಿಸಿಕೊಟ್ಟಿದ್ದ. ನಾನು ವಾಹನದಲ್ಲಿ ತೆರಳುತ್ತಿರುವಾಗ ಸಮೀಪದ ಹಳ್ಳಿಗಳ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಎದ್ದು ನಿಂತು ವಾಹನಕ್ಕೆ ಕೈ ಮುಗಿಯುತ್ತಿದ್ದರು. ವಾಪಸ್ ಬರುವಾಗಲೂ ಅದೇ ರೀತಿ ಕೈ ಮುಗಿದಾಗ ನನಗೆ ಆಶ್ಚರ್ಯವಾಯಿತು.

ವಾಹ ನ ಚಾಲಕನನ್ನು ಈ ಕುರಿತು ವಿಚಾರಿಸಿದೆ.
‘’ಇವರೆಲ್ಲಾ ಕಾಡು ಕುರುಬ ಮಹಿಳೆಯರು ಸ್ವಾಮಿ. ಸರ್ಕಾರ ಇವರಿಗೆ 650 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ನೀಡಲು ಯೋಜನೆ ರೂಪಿಸಿದಾಗ ಇವರ ಬಳಿ ಹಣವಿಲ್ಲದೆ, ಅರಣ್ಯದ ಕಟ್ಟಿಗೆಯಲ್ಲಿ ಜೀವನ ದೂಡುತ್ತಿದ್ದರು. ಸಾಹೇಬ್ರು ಬಂದ ನಂತರ ಇವರಿಗೆಲ್ಲಾ ತಾವೇ ಹಣ ಹಾಕಿ ಸಿಲೆಂಡರ್ ಮತ್ತು ಒಲೆ ಕೊಡಿಸಿದ್ದಾರೆ. ಹಾಗಾಗಿ ಸಾಹೇಬರು ಬರುವಾಗ, ಹೋಗುವಾಗ ಎದ್ದು ನಿಂತು ಕೈ ಮುಗಿಯುತ್ತಾರೆ ‘’ ಎಂದು ಡ್ರೈವರ್ ವಿವರಿಸಿದಾಗ ಏನನ್ನೂ ಹೇಳಲಾಗದೆ ಮೌನಕ್ಕೆ ಶರಣಾದೆ.

ಆ ಕ್ಷಣದಲ್ಲಿ ಆಡುವ ಮಾತಿಗಿಂತ ,ನಮ್ಮ ನಡೆ ಕೂಡ ಮುಖ್ಯ ಎನಿಸಿತು. ಈಗ ನನ್ನ ಸಹೋದರಿಯ ಉತ್ತರಕ್ರಿಯಾದಿ ಕಾರ್ಯಗಳನ್ನು ಅದೇ ರೀತಿ ನಡೆಸಲು ನಿರ್ಧರಿಸಿದೆ.

ಜಗದೀಶ್ ಕೊಪ್ಪ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!