Sunday, October 12, 2025
spot_img

ಅನರ್ಹ ಏಜೆನ್ಸಿಗೆ ಟೆಂಡರ್:೫೦ ಲಕ್ಷ ಕಿಕ್ ಬ್ಯಾಕ್ ಪಡೆದರೆ ಮಂತ್ರಿ ವೆಂಕಟೇಶ!

ಹೊರಗುತ್ತಿಗೆ ಟೆಂಡರ್ ಹಗರಣ:ಪಶು ಮಂತ್ರಿಗೆ ಸಿಕ್ಕಿತೆ ೫೦ ಲಕ್ಷ ಕಿಕ್ ಬ್ಯಾಕ್!

ಹೊರಗುತ್ತಿಗೆ ಟೆಂಡರ್ ಹಗರಣದಲ್ಲಿ ರಾಜ್ಯದ ಪಶು ಸಂಗೋಪನಾ ಮಂತ್ರಿ ರೂ ೫೦ ಲಕ್ಷ ಕಿಕ್ ಬ್ಯಾಕ್ ಪಡೆದು ಅನರ್ಹ ಏಜೆನ್ಸಿಯೊಂದಕ್ಕೆ ಮಾನವ ಸಂಪನ್ಮೂಲದ ಗುತ್ತಿಗೆ ನೀಡಿದ್ದಾರೆಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ಪಶು ಸಂಗೋಪನಾ ಇಲಾಖೆಯ ಕಚೇರಿ ಹಾಗೂ ಚಿಕಿತ್ಸಾಲಯಗಳಿಗೆ ಡಿ ದರ್ಜೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಪಡೆಯಲು ಕಳೆದ ಎಪ್ರಿಲ್ ನಲ್ಲಿ ಟೆಂಡರ್ ನಡೆಸಲಾಗಿತ್ತು.

ರಾಜ್ಯದ ಪಶು ಚಿಕಿತ್ಸಾಲಯಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ೭೦೦ ಡಿ ದರ್ಜೆ ನೌಕರರನ್ನು ಪಡೆಯಲು ದಿನಾಂಕ ೭/೦೫/೨೫ ರಂದು ಟೆಂಡರ್ ನೋಟಿಫಿಕೇಷನ್ ಹೊರಡಿಸಲಾಗಿತ್ತು.(ನೋಟಿಫಿಕೇಷನ್ CAH/EST/D/GROUP/TENDER/2025/26 dated 7/5/25)

ಸದರಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು ದಿನಾಂಕ ೫/೭/೨೫ ರಂದು ಶಾರ್ಪ್ ವಾಚ್ ಇನ್ ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ಪ್ರೈ ಲಿ ಇವರಿಗೆ ಕಾರ್ಯಾದೇಶ ನೀಡಲಾಗಿದೆ.

ಸರ್ಕಾರದ ಕಾರ್ಯದರ್ಶಿಗಳು.ಕಾರ್ಮಿಕ ಇಲಾಖೆ.ಅಮ್ಲಾನ್ ಅದಿತ್ಯ ಬಿಶ್ವಾಸ್ ಇವರು ೨೯/೧೨/೨೦೧೭ ಹೊರಡಿಸಿರುವ ಆದೇಶ ಸಂಖ್ಯೆ ಕಾಇ.೫೧.ಎಲ್ ಡಬ್ಲೂ ಎ ೨೦೧೭ ರಂತೆ ಹೊರಡಿಸಿರುವ ಸುತ್ತೋಲೆಯಂತೆ

ಯಾವುದೆ ಗುತ್ತಿಗೆದಾರರು ಈ ಹಿಂದೆ ಯಾವುದೆ ಸಕ್ಷಮ ನ್ಯಾಯಾಲಯದಿಂದ ಕಾರ್ಮಿಕ ಕಾನೂನಿನ ಉಲ್ಲಂಘನೆಗಾಗಿ ದಂಡನೆಗೊಳಗಾಗಿಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.ಟೆಂಡರ್ ದಾಖಲೆಗಳಲ್ಲಿ ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಂಡು ಟೆಂಡರ್ ದಾಖಲೆಯನ್ನು ಪ್ರಕಟಿಸತಕ್ಕದ್ದು.

ಮುಂದುವರಿದು ಸರ್ಕಾರದ ಉಪ ಕಾರ್ಯದರ್ಶಿ ಸಂಧ್ಯಾ ಎಲ್ ನಾಯಕ್.ಕಾರ್ಮಿಕ ಇಲಾಖೆ ಇವರು ಹೊರಡಿಸಿರುವ ಸುತ್ತೋಲೆ ಸಂಖ್ಯೆ:ಕಾಇ.೧೦೫ ಎಲ್ ಡಬ್ಲೂ ಎ ೨೦೨೨ ೦೧-೦೯-೨೦೨೨ ರಂತೆ ಸದರಿ ಗುತ್ತಿಗೆದಾರರು ಈ ಹಿಂದೆ ಸಕ್ಷಮ ನ್ಯಾಯಾಲಯದಿಂದ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಗಾಗಿ ದಂಡನೆಗೊಳಗಾಗಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸುತ್ತದೆ.
ಆದರೆ ಇಷ್ಟೆಲ್ಲ ಕಾನೂನೂಗಳಿದ್ದರು ಅವೆಲ್ಲವನ್ನು ಗಾಳಿಗೆ ತೂರಿರುವ ಸಚಿವ ವೆಂಕಟೇಶ್ ಏಜೆನ್ಸಿ ನೀಡಿದ ಪ್ರಸಾದ ತಿಂದು ಶಾರ್ಪ್ ಇನ್ ವೆಸ್ಟಿಗೇಷನ್ ಎಂಬ ಅನರ್ಹ ಏಜೆನ್ಸಿಗೆ ಕಾರ್ಯಾದೇಶ ನೀಡಿದ್ದಾರೆ.

ಸದರಿ ಏಜೆನ್ಸಿಯು ಸಹಾಯಕ ಆಯುಕ್ತರು ಹಾಗೂ ಕನಿಷ್ಟ ವೇತನ ಕಾಯ್ದೆ ೧೯೪೮ ರಡಿಯಲ್ಲಿ ನೇಮಕಗೊಂಡ ಪ್ರಾಧಿಕಾರಿ.ಬಳ್ಳಾರಿ ವಿಭಾಗ.ದಾವಣಗೆರೆ ನ್ಯಾಯಾಲಯ.ಆದೇಶ ಸಂಖ್ಯೆ ಸಕಾಆದಾ/ಕವೇಕಾ/ಬ/ಸಿ.ಆರ್-೬೦/೨೦೨೧/೨೨ ದಿನಾಂಕ ೨/೦೭/೨೦೨೪ ಪ್ರಕಾರ ಕಾರ್ಮಿಕ ಕಾಯ್ದೆಗಳ ಅನುಸಾರ ಕನಿಷ್ಟ ವೇತನ ಪಾವತಿಸದ ಹಿನ್ನೆಲೆಯಲ್ಲಿ ಕಾರ್ಮಿಕರ ಬಾಕೀ ವೇತನ ಪಾವತಿಸುವಂತೆ ಆದೇಶಿಸಿರುತ್ತದೆ.ಕಾರ್ಮಿಕ ನ್ಯಾಯಲಯದ ಆದೇಶ ಸ್ಪಷ್ಟವಾಗಿ ಸದರಿ ಏಜೆನ್ಸಿ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ನಡೆಸಿರುವುದನ್ನು ಹಾಗೂ ಕನಿಷ್ಟ ವೇತನ ಪಾವತಿಸಿಲ್ಲದಿರುವುದನ್ನು ಖಚಿತಪಡಿಸುತ್ತದೆ.

ಮುಂದುವರಿದಂತೆ

ಸದರಿ ಏಜೆನ್ಸಿಯು ಟೆಂಡರ್ ಷರತ್ತುಗಳನ್ನು ಪರಿಪಾಲಿಸದ ಹಿನ್ನೆಲೆಯಲ್ಲಿ ದಿನಾಂಕ ೮/೦೫/೨೦೨೫ ರಂದು ಮುಂದಿನ ಮೂರು ವರ್ಷಗಳ ಕಾಲ ಯಾವುದೆ ಟೆಂಡರ್ ನಲ್ಲಿ ಭಾಗೀಯಾಗದಂತೆ ಕಂದಾಯ ಇಲಾಖೆ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ (ಐಎಂಎ ಮತ್ತು ಇತರೆ ಕಂಪನಿಗಳ ವಂಚನೆ ಪ್ರಕರಣಗಳು) ಇವರು ಆದೇಶ ಹೊರಡಿಸಿರುತ್ತಾರೆ.ಈ ಆದೇಶದ ಪ್ರಕಾರ ಸದರಿ ಏಜೆನ್ಸಿಯು ಪಶು ಸಂಗೋಪನೆ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗೀಯಾಗಲು ತಾಂತ್ರಿಕವಾಗಿ ಅರ್ಹರಾಗಿರುವುದಿಲ್ಲ. ಒಂದು ಸರ್ಕಾರಿ ಇಲಾಖೆಯು ಟೆಂಡರ್ ನಿಯಮಾವಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡ ಏಜೆನ್ಸಿಯನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡುವುದು ನಿಯಮಾನುಸಾರದ ಕ್ರಮವಾಗಿರುತ್ತದೆ. ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ. ಅಸಮರ್ಪಕ ಸೇವೆಯಿಂದ ಕುಖ್ಯಾತ ಏಜೆನ್ಸಿಯನ್ನು ಹೊರಗಿಡುವುದು ನ್ಯಾಯಸಮ್ಮತವಾಗಿರುತ್ತದೆ..
ಸದರಿ ಪ್ರಕರಣದಲ್ಲಿ ಸಂಬಂಧಪಟ್ಟ ಸಚಿವರಿಗೆ ರೂ ೫೦ ಲಕ್ಷ ಲಂಚ ನೀಡಿ ಕಾರ್ಯಾದೇಶ ಪಡೆದಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿರುತ್ತದೆ.ಇಷ್ಟೆಲ್ಲ ಇದ್ದಾಗಿಯೂ ಪಶು ಸಂಗೋಪನಾ ಮಂತ್ರಿ ಏನು ಆಗಿಲ್ಲವೆಂಬಂತೆ ಬಾಯಿ ಒರೆಸಿಕೊಳ್ಳುತ್ತಿದ್ದಾರೆ.ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ಈಗಾಗಲೇ ಎರಡು ಸಾವಿರಕ್ಕು ಹೆಚ್ಚು ಹೊರಗುತ್ತಿಗೆ ನೌಕರರ ಟೆಂಡರ್ ನ್ಮು ಒಂದೇ ಮೂಲದ ಎರಡು ಏಜೆನ್ಸಿಗೆ ನೀಡಿ ಏಳು ವರ್ಷಗಳಿಂದ ಯಾವುದೆ ಟೆಂಡರ್ ನಡೆಸದೆ ಅದೇ ಏಜೆನ್ಸಿಗಳನ್ನು ಅಕ್ರಮವಾಗಿ ಮುಂದುವರಿಸಲಾಗುತ್ತಿದೆ.ಸಾಲದ್ದಕ್ಕೆ ಶೇ ೧೧ ರ ಸೇವಾ ಶುಲ್ಕ ನೀಡಿ ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡಿ ಸರಕಾರದ ಖಜಾನೆಗೆ ಕನ್ನ ಕೊರೆಯಲಾಗಿದೆ.

ಸಚಿವರಿಗೆ ಕಿಕ್ ಬ್ಯಾಕ್ ನೀಡಿಯೆ ಟೆಂಡರ್ ಪಡೆದಿರುವ ಏಜೆನ್ಸಿಯೂ ಸಹ ಪ್ರತಿಯೊಬ್ಬ ಅಭ್ಯರ್ಥಿಯಿಂದ ತಲಾ ೫೦ ಸಾವಿರ ವಸೂಲು ಮಾಡಿಯೆ ಗುತ್ತಿಗೆ ಆಧಾರದ ಕೆಲಸ ನೀಡಿದೆ.ಹಾಗೂ ಸರಕಾರದ ಮೀಸಲು ನಿಯಮಗಳನ್ನು ಸಹ ಉಲ್ಲಂಘಿಸಿ ಇಡೀ ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿದೆ. ಇನ್ನು ಶೇ ೪೦ ಲಂಚದ ಆರೋಪ ಮಾಡುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸಹ ಬಿಜೆಪಿಗೆ ಏನು ಕಡಿಮೆ ಇಲ್ಲದಂತಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲಾದರೂ ಪಶು ಸಂಗೋಪನಾ ಇಲಾಖೆಯ ಅಕ್ರಮಗಳ ಕುರಿತು ಗಮನಹರಿಸದಿದ್ದರೆ ಇಡೀ ಇಲಾಖೆಯಲ್ಲಿ ದನ ಕರುಗಳಿಗೆ ಮೇವು ಸಿಗದಿದ್ದರೂ ಅಧಿಕಾರಿಗಳಿಗಂತೂ ಭರ್ತಿ ಮೇವು ಖಚಿತವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!