ಚಿಕನ್ ಕಬಾಬ್, ಮೀನಿನ ಆಹಾರದಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ: ಮಾರಿದರೆ ಜೈಲು ಶಿಕ್ಷೆ
ಈಗ ಯಾವುದೆ ಮಾಂಸಹಾರಿ ಹೋಟೆಲ್ ಫಾಸ್ಟ್ ಪುಡ್ ರೆಸ್ಟೋರೆಂಟಿಗೆ ಹೋಗಿ ಚಿಕನ್ ಕಬಾಬು ಫಿಶ್ ಕಬಾಬು ಗೋಬಿ ಇರಲಿ ಎಲ್ಲವು ಕೆಂಪು ಕೆಂಪಾಗಿ ಮಿಂಚುತ್ತಿರುತ್ತವೆ ಅಲ್ಲವೆ.ಅದಕ್ಕೆ ಕಾರಣ ಇಷ್ಟೇ ಮನುಷ್ಯನ ಜೀವಕ್ಕೆ ಅಪಾಯವೊಡ್ಡುವ ರಾಸಾಯನಿಕ ಬಣ್ಣಗಳ ಮಿಶ್ರಣವೇ ಇದಕ್ಕೆ ಕಾರಣವಾಗಿದೆ.
ಖಾಸಗಿ ಕಾರ್ಯಕ್ರಮಗಳಲ್ಲು ಅಡಿಗೆ ತಯಾರಿಸುವವರು ಈ ರೀತಿಯ ರಾಸಯನಿಕ ಬಣ್ಣ ಸೇರಿಸಿ ನಿಮ್ಮ ಆರೋಗ್ಯ ಹದಗೆಡಿಸುತ್ತಿದ್ದಾರೆಂಬುದು ಈಗ ಸಾಬೀತಾಗಿದೆ.
ಅದರ ಪರಿಣಾಮ ಇನ್ನು ಮುಂದೆ ಮೀನು ಸೇರಿದಂತೆ ಚಿಕನ್ ಕಬಾಬ್ ಗೋಬಿ ಸೇರಿದಂತೆ ಯಾವುದೆ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆಯು ಜೂನ್ 24ರಂದು ಆದೇಶ ಹೊರಡಿಸಿದೆ.
ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಲಾಗಿತ್ತು
ಇದೇ ವೇಳೆ ಚಿಕನ್ ಕಬಾಬ್ ಗಳಲ್ಲೂ ಕೃತಕ ಬಣ್ಣಗಳ ಬೆರಸುವಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪರೀಕ್ಷೆಗೊಳಪಡಿಸಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಹಾರ ಸುರಕ್ಷತಾ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು.
ಕಳಪೆ ಗುಣಮಟ್ಟದ ಆಹಾರ ಸೇವನೆ ಇತ್ತಿಚೆಗೆ ಜನರ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟು ಮಾಡುತ್ತಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿರುತ್ತದೆ. ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 07 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 01) ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ. The Food Safety and Standards Act, 2006 ರ ನಿಯಮ 3(1)(zz)(viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ.
The Food Safety and Standards (Food Products Standards and Food Additives) Regulations, 2011 ರ ಅನ್ವಯ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ. ಕೃತಕ ಬಣ್ಣಗಳು ಬಳಕೆದಾರರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಬಾಬ್‌ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಆಹಾರ ಸುರಕ್ಷತೆ ವಿಚಾರದಲ್ಲಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.