ಮಂಡ್ಯ:ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿ ಶೋಚನೀಯವಾಗಿದ್ದು, ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನೆಡೆಸಿದ ಅವರು ಸರ್ಕಾರ ಹಾಗೂ ಜನಪ್ರತಿನಿಧಿ ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ , ಕನ್ನಡಿಗರ ತೆರಿಗೆ ಹಣದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಯೋಗ್ಯತೆ ಇಲ್ಲವೇ? ಕಳೆದ 30 ವರ್ಷಗಳಿಂದ ಕನ್ನಡ ಶಾಲೆಗಳನ್ನು ಹಂತ ಹಂತವಾಗಿ ಕಗ್ಗೊಲೆ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಶಾಲೆಗಳಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲವೇ? 30 ವರ್ಷಗಳಿಂದ ಕನ್ನಡ ಶಾಲೆಗಳನ್ನು ಕತ್ತಲೆಯಲ್ಲಿ ಇಟ್ಟಿದ್ದೀರಿ. ಶಾಲಾ ಕಟ್ಟಡಗಳು ಕುಸಿದು ಬೀಳುತ್ತಿವೆ,ಶಿಕ್ಷಕರ ಕೊರತೆಯಿದೆ. ಈ ಕೂಡಲೇ ವಿಶೇಷ ಪ್ಯಾಕೇಜ್ ಮೂಲಕ ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸಬೇಕು,” ಎಂದು ಒತ್ತಾಯಿಸಿದರು. ನಮ್ಮ ಈ ಎಚ್ಚರಿಕೆಯನ್ನು ಸರ್ಕಾರ ಹಗುರವಾಗಿ ಪರಿಗಣಿಸಿದರೆ ತಕ್ಕ ಶಾಸ್ತಿ ಕಾಯ್ದಿದೆ.ಮಾರ್ಚ್ 12ರಂದು ಇಡೀ ರಾಜ್ಯಾದ್ಯಂತ ಕನ್ನಡ ಶಾಲೆಗಳ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.ಅಂದು ಮಂಡ್ಯದಲ್ಲಿ ನಾವು ಹೆದ್ದಾರಿ ತಡೆ ನಡೆಸಲಿದ್ದೇವೆ.ಇಡೀ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿ ಕ್ರಾಂತಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹನಿಯಂಬಾಡಿ ಪಾರ್ಥಸಾರಥಿ, ಗಿರೀಶ್ ಗೌಡ, ಜಗದೀಶ್, ಗಂಗಾಧರ್, ಖಲೀಮ್,ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಸೌಭಾಗ್ಯ, ಎಂ.ಎಸ್. ಮಂಜುನಾಥ್, ಪ್ರಸನ್ನ ಹಾಗೂ ಜಿಲ್ಲೆಯ ಕನ್ನಡಪರ ಕಾರ್ಯ ಕರ್ತರು ಭಾಗವಹಿಸಿದ್ದರು.


