Wednesday, January 21, 2026
spot_img

ಕಾನೂನೂ ಜಾರಿಗೊಳಿಸಿದ ಪಾಲಿಕೆ ಅಧಿಕಾರಿ ಅಮಾನತ್ತು:ಹೈಕೋರ್ಟ್ ಗರಂ

ಬೆಂಗಳೂರು: ನಿಷೇಧಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ

ಬ್ಯಾನ‌ರ್ ತೆಗೆಸಿಹಾಕಿದ ಮಹಾನಗರ ಪಾಲಿಕೆ ಅಧಿಕಾರಿಯನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತಡೆ ನೀಡಿರುವ ಹೈಕೋರ್ಟ್, ‘ಸರ್ಕಾರದ ಈ ನಡೆ ಸಕ್ಷಮ ಪ್ರಾಧಿಕಾರವೊಂದರ ಅಧಿಕಾರ ದುರುಪಯೋಗಕ್ಕೆ ಹಿಡಿದ ಕೈಗನ್ನಡಿ’ ಎಂದು ಚಾಟಿ ಬೀಸಿದೆ.

“ನನ್ನನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಕ್ಟೋಬರ್ 9ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಬಳ್ಳಾರಿ ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮುನಾಫ್ ಪಟೇಲ್ ಖಾದರ್ ಪಟೇಲ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಮಧ್ಯಂತರ ತಡೆ ಆದೇಶ ನೀಡಿದೆ.

‘ಸರ್ಕಾರಿ ಅಧಿಕಾರಿಗಳ ಅಮಾನತು ಆದೇಶಗಳನ್ನು ನಿರ್ದೇಶಿಸುವವರು ರಾಜಕೀಯ ಯಜಮಾನರೇ ಆಗಿರುತ್ತಾರೆ. ಹೀಗಾಗಿ, ಇಂತಹ ಅಮಾನತು ಆದೇಶಗಳ ಹಿಂದೆ ಸಾಕಷ್ಟು ವೈಯಕ್ತಿಕ ಹಿತಾಸಕ್ತಿಗಳು ಅಡಗಿರುತ್ತವೆ. ಈ ಪ್ರಕರಣದಲ್ಲಿ ಅರ್ಜಿದಾರರನ್ನು ಅಮಾನತುಗೊಳಿಸಿರುವುದು ಮೇಲ್ನೋಟಕ್ಕೆ ದುರುದ್ದೇಶಪೂರಿತ ಮತ್ತು ಅಧಿಕಾರ ದುರುಪಯೋಗದಿಂದ ಕೂಡಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದೆ.

‘ಪಾಲಿಕೆಯೇ ಕೈಗೊಂಡಿದ್ದ ಠರಾವಿನ ಅನುಸಾರ ಬಳ್ಳಾರಿಯ ಸಂಗಮ ವೃತ್ತದಲ್ಲಿ ಬ್ಯಾನ‌ರ್, ಕಟೌಟ್ ಅಥವಾ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ ಮತ್ತು ಅಂತಹ ಪ್ರದರ್ಶನಗಳು ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆಗಟ್ಟುವಿಕೆ ಕಾಯ್ದೆ-1981ರ ಉಲ್ಲಂಘನೆಯಾಗುತ್ತದೆ ಎಂದೂ ವಿವರಿಸಲಾಗಿದೆ. ಹೀಗಾಗಿಯೇ, ಅರ್ಜಿದಾರ ಮುನಾಫ್ ಪಟೇಲ್ ನಿಷ್ಪಕ್ಷಪಾತವಾಗಿ ತಮ್ಮ ಅಧಿಕಾರ ಚಲಾಯಿಸಿ ಸಂಗಮ ವೃತ್ತದಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ತೆಗೆದುಹಾಕಿದ್ದಾರೆ’ ಎಂದು ನ್ಯಾಯಪೀಠ ವಿವರಿಸಿದೆ.

“ಅಳವಡಿಸಲಾಗಿದ್ದ ಬ್ಯಾನರ್ ಕಾರ್ಪೊರೇಟರ್ ಒಬ್ಬರ ಪತಿಯದ್ದಾಗಿತ್ತು ಎಂಬ ಕಾರಣಕ್ಕಾಗಿ ಅರ್ಜಿದಾರರಿಗೆ ಅಮಾನತು ಶಿಕ್ಷೆ ವಿಧಿಸಿರುವುದು ಆಘಾತಕಾರಿ. ಕಾನೂನಿನ ಪ್ರಕಾರ ತಮ್ಮ ಕರ್ತವ್ಯ ನಿರ್ವಹಿಸಿದ ಅರ್ಜಿದಾರರು ಈಗ ರಾಜಕೀಯ ಕಾರಣಗಳಿಗಾಗಿ ಅಮಾನತಿನ ಕೋಪವನ್ನು ಎದುರಿಸುವಂತಾಗಿದೆ. ಪಾಲಿಕೆಯ ಠರಾವಿಗೆ ಸಹಿ ಹಾಕಿದ್ದ ಆಯುಕ್ತರೇ ಅರ್ಜಿದಾರರನ್ನು ಅಮಾನತುಗೊಳಿಸಬೇಕು ಎಂದು ಶಿಫಾರಸು ಮಾಡಿದ್ದು ಇದರ ಅನುಸಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಮಾನತು ಆದೇಶವನ್ನು ಹೊರಡಿಸಿರುವುದು ಚೋದ್ಯದ ಸಂಗತಿ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

ಪ್ರತಿವಾದಿಗಳಾದ ರಾಜ್ಯ ನಗರಾಭಿವೃದ್ಧಿ ಇಲಾಖೆ, ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ್ದು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿದೆ.

ಪ್ರಕರಣವೇನು?:

ವಾಲ್ಮೀಕಿ ಜಯಂತಿ ನಿಮಿತ್ತ ಶ್ರೀನಿವಾಸ್‌ (ಸ್ಥಳೀಯ ಕಾರ್ಪೋರೇಟ‌ರ್ ಪತಿ) ಬಳ್ಳಾರಿ ನಗರದ ಸಂಗಮ
ಸರ್ಕಲ್‌ನಲ್ಲಿ ತಮ್ಮ ಶುಭಾಶಯ ಕೋರುವ ಬ್ಯಾನ‌ರ್ ಅಳವಡಿಸಿದ್ದರು. ಪಾಲಿಕೆ ಅಧಿಕಾರಿಗಳು ಎಂದಿನಂತೆ ಸ್ಥಳದಲ್ಲಿನ ಅನಧಿಕೃತ ಜಾಹೀರಾತುಗಳು, ವಾಣಿಜ್ಯದ, ಜನ್ಮದಿನದ ಶುಭಾಶಯ ಕೋರುವ ಬ್ಯಾನರ್ ಹಾಗೂ ಇತರೆ ಫಲಕಗಳನ್ನು ತೆರವುಗೊಳಿಸುವಾಗ ಶ್ರೀನಿವಾಸ್ ಅವರ ಬ್ಯಾನ‌ರ್ ಅನ್ನೂ ಅಕ್ಟೋಬ‌ರ್ 6ರಂದು ತೆರವುಗೊಳಿಸಿದ್ದರು.

‘ಬಳ್ಳಾರಿ ನಗರದ ಸೌಂದರ್ಯವನ್ನು ಹೆಚ್ಚಿಸುವುದು ಮಹಾನಗರ ಪಾಲಿಕೆಯ ಉದ್ದೇಶವಾಗಿರುತ್ತದೆ ಹಾಗೂ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ-1976ರ ಕಲಂ 133 ಮತ್ತು 134ರ ಅಡಿಯಲ್ಲಿ ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಬ್ಯಾನರ್, ಬಂಟಿಂಗ್‌, ಕಟ್‌ಔಟ್ ಹಾಗೂ ಇತರೆ ಜಾಹೀರಾತು ಫಲಕ ಅಳವಡಿಸುವುದನ್ನು ನಿಷೇಧಿಸಲಾಗಿರುತ್ತದೆ’ ಎಂದು ಪಾಲಿಕೆ ಈ ಹಿಂದೆ ನಿರ್ಣಯ ಕೈಗೊಂಡಿತ್ತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!