Wednesday, January 21, 2026
spot_img

ಚಿಕ್ಕಮಗಳೂರು ವೈದ್ಯಕೀಯ ವಿದ್ಯಾರ್ಥಿನಿಗೆ ಕಿರುಕುಳ:ಪೋಲಿಸ್ ದೂರು ದಾಖಲು

ಚಿಕ್ಕಮಗಳೂರು: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕ ಡಾ.ಗಂಗಾಧರ ಅವರು ಅಸಭ್ಯ ಮೆಸೇಜ್ ಕಳುಹಿಸಿದ್ದಾರೆ. ಅವರು ಹೇಳಿದಂತೆ ಕೇಳದ ಕಾರಣಕ್ಕೆ ಹಾಜರಾತಿ ಕೊರತೆಯ ನೆಪದಲ್ಲಿ ಪರೀಕ್ಷೆಗೆ ಹಾಜರಾಗದಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ಕುರಿತ ವಿದ್ಯಾರ್ಥಿನಿ ನೀಡಿರುವ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಕಾಲೇಜಿನ ಪ್ರಾಧ್ಯಾಪಕರು ಕೂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮಂಗಳವಾರ ತೆರಳಿ ಮನವಿ ಸಲ್ಲಿಸಿದ್ದು, ಕಾಲೇಜಿನ ಹೆಸರಿಗೆ ಧಕ್ಕೆ ಆಗುತ್ತಿರುವ ವಿಡಿಯೊ ಪ್ರಸಾರ ತಡೆಯುವಂತೆ ಕೋರಿದ್ದಾರೆ.

‘ವಿದ್ಯಾರ್ಥಿನಿ ತರಗತಿಗೆ ಹಾಜರಾಗದ ಕಾರಣ ಹಾಜರಾತಿ ಕೊರತೆಯಾಗಿದೆ. ಗಂಗಾಧರ ಅವರ ಕುರಿತು ಕಾಲೇಜಿಗೆ ಲಿಖಿತ ದೂರು ನೀಡಿಲ್ಲ. ಆಂತರಿಕ ವಿಚಾರಣಾ ಸಮಿತಿ, ಪೋಶ್ ಸಮಿತಿ ಮುಂದೆ ದೂರು ನೀಡಿಲ್ಲ. ಇದು ಎರಡು ವರ್ಷಗಳ ಹಳೆಯ ಪ್ರಕರಣವಾಗಿದ್ದು, ಸಂಪೂರ್ಣ ವೈಯಕ್ತಿಕ ವಿಷಯ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಇದೇ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಅವರು ವಿವಾಹವಾಗಿದ್ದು, ಅಕ್ಟೋಬರ್ 29ರಂದು ಕೆಲ ಸಂಘಟನೆಗಳ ಜತೆ ಕಾಲೇಜಿಗೆ ಬಂದು ಪರೀಕ್ಷೆಗೆ ಅರ್ಹತೆ ನೀಡುವಂತೆ ಕೇಳಿದ್ದರು. ಗಂಗಾಧರ ಅವರ ವಿರುದ್ಧ ಆರೋಪ ಮಾಡಿದ್ದರು. ಪೊಲೀಸರಿಗೆ ಲಿಖಿತವಾಗಿ ದೂರು ನೀಡಲು ತಿಳಿಸಲಾಗಿತ್ತು. ಹಾಜರಾತಿ ಮತ್ತು ಅಂಕಗಳ ಕೊರತೆ ಇರುವುದರಿಂದ ಪೂರಕ ಪರೀಕ್ಷೆ ಬರೆಯಲು ಒಪ್ಪಿದ್ದರು’ ಎಂದು ವಿವರಿಸಿದ್ದಾರೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದು, ಕಾಲೇಜಿನ ಗೌರವಕ್ಕೆ ಧಕ್ಕೆಯಾಗುತ್ತಿದೆ. ದುರುದ್ದೇಶದಿಂದ ಕೂಡಿರುವ ವಿಡಿಯೊ ಪ್ರಸಾರ ತಡೆಯಬೇಕು ಎಂದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಲೇಜಿನ ಡೀನ್ ಡಾ.ಹರೀಶ್, ‘ಗಂಗಾ ಧರ ಅವರ ವಿರುದ್ಧ ಲಿಖಿತ ದೂರನ್ನು ಕಾಲೇಜಿಗೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡಿರುವ ಆರೋಪದ ವಿಡಿಯೊ ನೋಡಿದ ಬಳಿಕ ನೋಟಿಸ್ ನೀಡಿದ್ದೇವೆ. ಬುಧವಾರ ಪೋಶ್ ಸಮಿತಿ ಸಭೆ ನಡೆಯಲಿದ್ದು, ವಿಷಯದ ಕುರಿತು ಚರ್ಚಿಸಲಾಗುವುದು’ ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ಗಂಗಾಧರ್ ಪ್ರತಿಕ್ರಿಯಿಸಿ, ‘ಹಾಜರಾತಿ ಕೊರತೆ ಸೇರಿ ಬೇರೆ ವಿಷಯಗಳ ಕಾರಣಕ್ಕೆ ನನ್ನ ಹೆಸರು ಬಳಸಿ ತೇಜೋವಧೆ ಮಾಡಿದ್ದಾರೆ. ಕಡಿಮೆ ಅಂಕ ಪಡೆದವರಿಗೆ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಸೂಚನೆ ನೀಡುವುದು ನಮ್ಮ ಕಾರ್ಯವಿಧಾನ. ಸ್ಕ್ರೀನ್ ಶಾಟ್, ಆಡಿಯೊಗಳು ಮಾಹಿತಿಯಲ್ಲಿ ಸತ್ಯಾಂಶ ಇಲ್ಲ. ನನ್ನ ಬಳಿಯೂ ಕೆಲವು ಸ್ಕ್ರೀನ್‌ಶಾಟ್‌ಗಳು ಇವೆ. ಸಮಯ ಬಂದಾಗ ಪ್ರಸ್ತುತಪಡಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!