ಮಂಡ್ಯ: ಸಮಗ್ರ ಕೃಷಿಯಿಂದ ಸುಸ್ಥಿರತೆ ಎಂಬ ಧ್ಯೇಯ ವಾಕ್ಯದಡಿ ಮೂರು ದಿನ ಕೃಷಿ ಮೇಳವು ತಾಲ್ಲೂಕಿನ ವಿ.ಸಿ.ಫಾರಂ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೃಷಿ ಮೇಳದ ಅಗತ್ಯ ಹಾಗೂ ಅರಿವಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ವಿವಿ ವಿಶೇಷ ಅಧಿಕಾರಿ ಕೆ.ಎಂ. ಹರಿಣಿಕುಮಾರ್ ಹೇಳಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ಕರ್ನಾಟಕ ಸರ್ಕಾರದ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಜಲಾನಯನ ಅಭಿವೃದ್ಧಿ, ರೇಷ್ಮೆ, ಅರಣ್ಯ, ಮೀನುಗಾರಿಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಬಾರ್ಡ್ ಸಹಯೋಗದಲ್ಲಿ ಡಿ. 5, 6 ಮತ್ತು 7 ರಂದು ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಡಿ.5 ರಂದು ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ಇರುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಸಚಿವರಾದ ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಕೆ.ವೆಂಕಟೇಶ್ ಆಗಮಿಸುವರು. ಶಾಸಕರಾದ ಎಂ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಎಚ್.ಟಿ. ಮಂಜು, ಕೆ.ಎಂ.ಉದಯ್, ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಕೆ. ವಿವೇಕಾನಂದ, ಮಧು ಜಿ.ಮಾದೇಗೌಡ ಭಾಗವಹಿಸುವರು ಎಂದರು.
ಡಿ.6 ರಂದು ಬೆಳಿಗ್ಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಆಗಮಿಸುವರು. ಡಿ.7 ರಂದು ಮಧ್ಯಾಹ್ನ 2 ಗಂಟೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯಪಾಲ ಥಾವರಚಂದ ಗೆಹಲೋತ್ ಭಾಗವಹಿಸುವರು ಎಂದರು. ಕೃಷಿ ವಿವಿ ಕುಲಸಚಿವ ಪಿ.ಎಸ್.ಫಾತಿಮಾ, ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ, ಡೀನ್ ಮುನಿಸ್ವಾಮಿಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಸ್.ಬಸವರಾಜು, ವಿಸ್ತರಣಾ ನಿರ್ದೇಶಕ ಎ.ಡಿ.ರಂಗನಾಥ ಭಾಗವಹಿಸಿದ್ದರು.


