ಪಾಂಡವಪುರ : ಹಿಂದುಗಳು ಬಹಳ ಸಡಗರ, ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬದಲ್ಲಿ ಸಾರ್ವಜನಿಕರು ಆಟವಾಡುವ ಗ್ರಾಮೀಣ ಸೊಗಡಿನ ಕ್ರೀಡೆಗಳಾದ ಘಟ್ಟಮನೆ, ಪಚ್ಚಿ-ಪಗಡೆ, ಚೌಕಭಾರ, ಇಸ್ಫೀಟ್ ಆಟಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸದೇ ಏ.9 ಮತ್ತು 10ರಂದು ಆಟವಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪ್ರದಾಯದಂತ ಗ್ರಾಮೀಣ ಕ್ರೀಡೆಗಳನ್ನು ಯುಗಾದಿ ಹಬ್ಬದಂದು
ಪ್ರತಿ ವರ್ಷ ಆಟವಾಡುವುದು ಮಾಮಾಲಾಗಿದೆ. ಆದರೆ ಜಿಲ್ಲಾಡಳಿತ ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಈ ಆಟಗಳಿಗೆ ನಿಷೇಧ ಹೇರಿರುವುದು ಸರಿಯಲ್ಲ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎರದು ದಿನಗಳು ಮನರಂಜನೆ ಆಟಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿ ಹಿಂದುಗಳ ಹಬ್ಬದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರು ಭಾಗವಹಿಸುವುದು ಸಹಜ, ಅಂತೆಯೇ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಹಬ್ಬಗಳಲ್ಲಿ ಹಿಂದುಗಳು ಭಾಗವಹಿಸುವ ಮೂಲಕ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸಹೋದರರಂತೆ ಬಾಳ್ವೆ ನಡೆಸುತ್ತಿದ್ದೇವೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಹೀಗಾಗಿ ಎರಡು ದಿನಗಳವರೆಗೆ ಸಾಂಪ್ರದಾಯಿಕವಾಗಿ ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ನೀಡಬೇಕು. ನಿಷೇಧದ ನೆಪದಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆ ಹೊರಬೇಕು ಎಂದು ಎಚ್ಚರಿಸಿದರು.
ಕ್ರಿಕೆಟ್ ಬೆಟ್ಟಿಂಗ್ ನಿಲ್ಲಿಸಿ.
ಆನ್ಲೈನ್ ಮೂಲಕ ರಮ್ಮಿ, ಕ್ರಿಕೆಟ್ ಬೆಟ್ಟಿಂಗ್ ದಂಧೆ, ಕುದುರೆ ರೇಸ್ ನಡೆಯುತ್ತಿದೆ. ಸರ್ಕಾರ ಇದಕ್ಕೆ ಮೊದಲು ಕಡಿವಾಣ ಹಾಕಲಿ. ಅದನ್ನು ಬಿಟ್ಟು ವರ್ಷಕೊಮ್ಮೆ ಬರುವ ಯುಗಾಧಿ ಹಬ್ಬದಲ್ಲಿ ಆಟವಾಡುವ ಗ್ರಾಮೀಣ ಆಟಗಳಿಗೆ ನಿಷೇಧ ಹೇರುವುದು ಸಮಂಜಸವಲ್ಲ. ಆದೇಶದ ನೆಪದಲ್ಲಿ ಪೊಲೀಸರು ಸಾರ್ವಜನಿಕರಿಗೆ ವಿನಾ:ಕಾರಣ ತೊಂದರೆ ಕೊಡಬಾರದು. ಹಬ್ಬದ ಅಟಗಳಿಗೆ ಅಡ್ಡಿಪಡಿಸುತ್ತಿರುವ ಪೊಲೀಸ್ ಕ್ರಮದ ಬಗ್ಗೆ ಶಾಸಕರು, ಸಚಿವರು ಮಾತನಾಡದೇ ಮೌನಕ್ಕೆ ಶರಣಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಹೈಕೋರ್ಟ್ ಸ್ಫೋರ್ಟ್ಸ್ ಅಂಡ್ ಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ಗಳು ಸೇರಿದಂತೆ ನೋಂದಾಯಿತ ಕ್ಲಬ್ಗಳಿಗೆ ಆಟವಾಡಲು ಅವಕಾಶ ನೀಡಿದೆ. ಅದರಂತೆ ಜಿಲ್ಲಾಡಳಿತವು ಅವುಗಳಿಗೆ ಅಡ್ಡಿಪಡಿಸದೆ ಅವಕಾಶ ನೀಡಬೇಕು. ಆದರೆ ನೋಂದಾಯಿತವಲ್ಲದೆ ಅನಧಿಕೃತ ಕ್ಲಬ್ಗಳು ಇಂತಹ ಆಟಗಳಲ್ಲಿ ತೊಡಗಿದರೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಮಹೇಶ್, ಲೋಕೇಶ್ (ಅಣ್ಣಕಿಟ್ಟಿ), ಎಚ್.ಸಿ.ಕೃಷ್ಣೇಗೌಡ (ಪಟೇಲ್) , ಸೂರ್ಯ ಸ್ಫೋರ್ಟ್ಸ್ ಅಂಡ್ ಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ನ ಕಾರ್ಯದರ್ಶಿ ಅರುಣ್ ಇತರರಿದ್ದರು.