Thursday, January 16, 2025
spot_img

ಪಾಂಡವಪುರ:ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಗೆ ಚಾಲನೆ

ಪಾಂಡವಪುರ : ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಆಶ್ರಯದಲ್ಲಿ
ಕಾರ್ಮಿಕರ ನೋಂದಣಿ ಅಭಿಯಾನವು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಅಭಿಯಾನದಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಹೆಸರು ನೋಂದಣಿ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್, ಸರ್ಕಾರ ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ’ ಅನುಷ್ಠಾನಗೊಳಿಸುತ್ತಿದೆ. ಸದರಿ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಯೋಜನೆಯಡಿ 20 ಅಸಂಘಟಿತ ವರ್ಗಗಳಾದ ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್ ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ/ಸಭಾ ಭವನ/ಟೆಂಟ್/ಪೆಂಡಾಲ್ ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು ಹಾಗೂ ಅಲೆಮಾರಿ ಪಂಗಡದ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಎಂದರು.

ಈ ಯೋಜನೆಯು ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯ, ಅರ್ಜಿದಾರರ ವಯೋಮಿತಿ 18 ರಿಂದ 60 ವರ್ಷಗಳು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಇಎಸ್ ಐ ಮತ್ತು ಪಿಎಫ್ ಸೌಲಭ್ಯ ಹೊಂದಿರಬಾರದು. ನೋಂದಣಿಗಾಗಿ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ವಯಸ್ಸಿನ ಪ್ರಮಾಣ ಪತ್ರ (ಆಧಾರ್ ಕಾರ್ಡ್, ಶಾಲಾ ದಾಖಲೆ, ಜನನ ಪ್ರಮಾಣ ಪತ್ರ, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್, ಚುನಾವಣಾ ಗುರುತಿನ ಚೀಟಿ, ಜನ್ಮ ದಿನಾಂಕ ದಾಖಲಿಸಿದ ಪ್ಯಾನ್ ಕಾರ್ಡ್ ಇವುಗಳಲ್ಲಿ ಯಾವುದಾದರೊಂದು ಪ್ರತಿಯನ್ನು ಅಪ್ ಲೋಡ್ ಮಾಡುವುದು), ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಈ ಅಗತ್ಯ ದಾಖಲೆಗಳೊಂದಿಗೆwww.ksuwsssb.karnataka.gov.in ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಎಂದು ತಿಳಿಸಿದರು.

ಅಪಘಾತ ಪರಿಹಾರ ಸೌಲಭ್ಯಗಳು : ಅಪಘಾತದಿಂದ ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ.1 ಲಕ್ಷ ಪರಿಹಾರ. ಅಪಘಾತದಿಂದ ಸಂಪೂರ್ಣ / ಭಾಗಶಃ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.1 ಲಕ್ಷಗಳವರೆಗೆ ಪರಿಹಾರ (ಶೇಕಡವಾರು ದುರ್ಬಲತೆ ಆಧಾರದ ಮೇಲೆ). ಆಸ್ಪತ್ರೆ ವೆಚ್ಚ ಮರುಪಾವತಿ ರೂ.50 ಸಾವಿರ ರೂ.ಗಳವರೆಗೆ. (ಅಪಘಾತ ಪ್ರಕರಣಗಳಲ್ಲಿ ಮಾತ್ರ) ಪರಿಹಾರವನ್ನು ನೀಡಲಾಗುವುದು ಎಂದರು.

ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ: ನೋಂದಾಯಿತ ಫಲಾನುಭವಿಯು ವಯೋಸಹಜ/ಖಾಯಿಲೆ/ಅಕಾಲಿಕ ಅಥವಾ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದಲ್ಲಿ ಫಲಾನುಭವಿಯ ಕುಟುಂಬದವರಿಗೆ ಅಂತ್ಯಕ್ರಿಯೆ ವೆಚ್ಚಕ್ಕಾಗಿ ರೂ.10ಸಾವಿರ ರೂ.ಗಳ ಧನ ಸಹಾಯ ನೀಡಲಾಗುತ್ತದೆ ಎಂದರು.

ಕ್ರೈಮ್ ವಿಧಾನ: ಅರ್ಜಿದಾರ / ಫಲಾನುಭವಿಯು ಅಪಘಾತ ಪರಿಹಾರಕ್ಕಾಗಿ ಅಪಘಾತ ಸಂಭವಿಸಿದ 1 ವರ್ಷದೊಳಗೆ ಹಾಗೂ ಸಹಜ ಮರಣ ಪ್ರಕರಣಗಳಲ್ಲಿ ಮರಣ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು. ನೋಂದಣಿ / ಕ್ಷೇಮ್ / ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸಗಳು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಛೇರಿ, ಕಲ್ಯಾಣ ಸುರಕ್ಷಾ ಭವನ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ ಬೆಂಗಳೂರು-560 029 ksuwssb.karnataka.gov.in ಅಥವಾ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ : 155214ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ವೇಳೆ ಕಾರ್ಮಿಕ ಇಲಾಖೆಯ ಪಾಂಡವಪುರ ನಿರೀಕ್ಷಕಿ ಅಮರಾವತಿ, ಸಿಬ್ಬಂದಿ ರೂಪಾ, ಪತ್ರಕರ್ತರಾದ ಎನ್.ಕೃಷ್ಣೇಗೌಡ, ವಿಶ್ವನಾಥ್, ರಘುವೀರ್, ಬೀರಶೆಟ್ಟಹಳ್ಳಿ ಭಾಸ್ಕರ್, ಮಧು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!