ಮೂಳೆ ಡಾಕ್ಟರ್ “ದರ್ಶನ’ಕ್ಕಾಗಿ ಗಂಟೆಗಟ್ಟಲೇ ಕಾದು ಕುಳಿತ ರೋಗಿಗಳು
ಪಾಂಡವಪುರ : ಮೂಳೆ ಡಾಕ್ಟರ್ ”ದರ್ಶನ”ಕ್ಕಾಗಿ ನೂರಾರು ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತರು.
ಹೌದು. ಈ ಪ್ರಸಂಗ ಬೇರೆಲ್ಲೂ ನಡೆಯಲಿಲ್ಲ. ಪಾಂಡವಪುರ ಪಟ್ಟಣದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಈ ಪ್ರಸಂಗ ನಡೆಯಿತು.
ಮಂಡಿನೋವು, ಪಾದ ನೋವು, ಕಾಲು ಹಾಗೂ ಕೈ ನೋವು ಸೇರಿದಂತೆ ಇತರೆ ಮೂಳೆ ಮತ್ತು ಕೀಲು ರೋಗಗಳಿಗೆ ಸಂಬಂಧಿಸಿದ ನೂರಾರು ರೋಗಿಗಳು ಮೂಳೆ ಮತ್ತು ಕೀಲು ತಜ್ಞ ವೈದ್ಯ ಡಾ.ದರ್ಶನ್ ಗಾಗಿ ಜಾತಕ ಪಕ್ಷಿ ರೀತಿ ಕಾದು ಕಾದು ಬಸವಳಿದರು.
ಮಧ್ಯಾಹ್ನ 12ಕ್ಕೆ ಹೊರ ಹೋದ ವೈದ್ಯ ದರ್ಶನ್ 2ಗಂಟೆಯಾದರೂ ಪತ್ತೆ ಇರಲಿಲ್ಲ. ಇದರಿಂದಾಗಿ ಗಂಟೆಗಟ್ಟಲೇ ರೋಗಿಗಳು ಕಾದು ಕುಳಿತುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಇಷ್ಟಾದರೂ ಇವರ ಗೋಳು ಕೇಳುವವರು ಯಾರೂ ಇಲ್ಲದಂತಾಯಿತು. ವೈದ್ಯರ ನಿರ್ಲಕ್ಷ್ಯದ ವಿರುದ್ದ ರೋಗಿಗಳು ಕಿಡಿಕಾರಿದರು.
Hide quoted text
ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಮಧ್ಯಾಹ್ನ 1ರಿಂದ 2ರ ವರೆಗೆ ಊಟದ ವಿರಾಮ ಇದೆಯಾದರೂ ಮೂಳೆ ಮತ್ತು ಕೀಲು ತಜ್ಞ ವೈದ್ಯ ಡಾ.ದರ್ಶನ್ ಮಧ್ಯಾಹ್ನ 12ಕ್ಕೆ ಊಟದ ನೆಪವೊಡ್ಡಿ ಆಸ್ಪತ್ರೆಯಿಂದ ತೆರಳಿದ್ದಾರೆ. ಹೀಗಾಗಿ ಮಂಡಿ, ಪಾದ ಹಾಗೂ ಕೈ ನೋವಿನ ತಪಾಸಣೆಗಾಗಿ ಬಂದಿದ್ದ ನೂರಾರು ರೋಗಿಗಳು ವೈದ್ಯ ದರ್ಶನ್ ನ ‘ದರ್ಶನ’ಕ್ಕಾಗಿ ಗಂಟೆಗಟ್ಟಲೇ ಕಾದು ಕಾದು ಬಸವಳಿಯುವಂತಾಯಿತು.
ಅದರಲ್ಲೂ ಸಕ್ಕರೆ ಕಾಯಿಲೆ ಹಾಗೂ ಬಿಪಿ ಕಾಯಿಲೆ ರೋಗದಿಂದ ಬಳಲುತ್ತಿರುವ ಅನೇಕ ರೋಗಿಗಳು ಸರಿಯಾದ ಸಮಯಕ್ಕೆ ಮಧ್ಯಾಹ್ನ ಊಟ ಮಾಡದೇ ವೈದ್ಯರಿಗಾಗಿ ಕಾದು ಕುಳಿತುಕೊಳ್ಳುವಂತಾಯಿತು.
‘ಮಂಡಿ ನೋವು ತೋರಿಸುವುದಕ್ಕಾಗಿ ಬೆಳಗ್ಗೆ ಆಸ್ಪತ್ರೆಗೆ ಬಂದೆವು. ಆದರೆ ಮೂಳೆ ಡಾಕ್ಟರ್ ಮಧ್ಯಾಹ್ನ 12ಕ್ಕೆ ಆಸ್ಪತ್ರೆಯಿಂದ ಹೋದವರು ಈಗ 2ಗಂಟೆಯಾದರೂ ಆಸ್ಪತ್ರೆಗೆ ಬಂದಿಲ್ಲ. ಮೊದಲೇ ನಾವು ಬಿಪಿ, ಶುಗರ್ ನಿಂದ ಬಳಲುತ್ತಿದ್ದೇವೆ. ಇನ್ನೂ ಮಧ್ಯಾಹ್ನದ ಊಟಕ್ಕೂ ಹೋಗಿಲ್ಲ; ಮೂಳೆ ಡಾಕ್ಟರ್ ಗಾಗಿ ಕಾಯುತ್ತಾ ಕುಳಿತಿದ್ದೇವೆ. ನಾವು ಬಂದು ಎರಡುವರೆ ಗಂಟೆಯಾದರೂ ಡಾಕ್ಟರ್ ಬಂದಿಲ್ಲ’ ಎಂದು ಲಕ್ಷ್ಮೀಸಾಗರ ರಾಮೇಗೌಡ ಇತರರು ದೂರಿದರು.