ಪಾಂಡವಪುರ : ಪಟ್ಟಣದ ಫ್ರೆಂಚ್ ರಾಕ್ಸ್ ಶತಮಾನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಯ ಪ್ರಾರಂಭೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ಬೇಸಿಗೆ ರಜೆ ನಂತರ ತಾಲೂಕಿನಾದ್ಯಂತ ಬುಧವಾರದಿಂದ ಶಾಲೆಗಳು ಪುನರಾರಂಭವಾಗಿದ್ದರೂ, ಶುಕ್ರವಾರ ಅಧಿಕೃತವಾಗಿ ಶಾಲಾ
ಪ್ರಾರಂಭೋತ್ಸವ ಕಾರ್ಯಕ್ರಮ ಆಚರಣೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಆರತಿ ಬೆಳಗಿ ಪುಷ್ಪವೃಷ್ಠಿ ಮಾಡಿ ನಗುಮುಖದಿಂದ ಸ್ವಾಗತಿಸಿಕೊಳ್ಳುವ ಮೂಲಕ ಶಾಲೆಗೆ ಮಕ್ಕಳನ್ನು ಶಿಕ್ಷಕರು ಬರಮಾಡಿಕೊಂಡರು.
ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸುವ ಮೂಲಕ ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದ ಶಾಲಾ ಸಿಬ್ಬಂದಿ ವರ್ಗ ಮಕ್ಕಳಿಗೆ ಸಿಹಿ ಊಟ ಉಣಬಡಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
2024-25ನೇ ಸಾಲಿನ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಇಂದಿನಿಂದ ಅಧಿಕೃತವಾಗಿ ಆರಂಭಗೊಳ್ಳುತ್ತಿದ್ದು ಶಾಲಾ ಆವರಣದಲ್ಲಿ ರಂಗೋಲಿ, ಮಾವಿನ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಕ್ಕಳು ಸಂತೋಷದಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದರು.
ಎಸ್ ಡಿಎಂಸಿ ಅಧ್ಯಕ್ಷ ಕೇಶವ ಹಾಗೂ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಂಜುನಾಥ್ ಮಕ್ಕಳ ತಲೆ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಎಸ್ ಡಿಎಂಸಿ ಸದಸ್ಯ ಹೇಮಂತ್ ಕುಮಾರ್, ಶಿಕ್ಷಕರಾದ ಆರೋಕ್ಯಮೇರಿ, ರಾಜಲಕ್ಷ್ಮೀ, ಶಿವರತ್ನಮ್ಮ, ಶಿವಲಿಂಗಮ್ಮ, ಭವ್ಯ, ಸುಮಿತ್ರ, ಗಾಯತ್ರಿ, ಮೇರಿ ರೋಸ್ಲಿನ್, ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮ, ಅತಿಥಿ ಶಿಕ್ಷಕಿ ಸಿಂಧು ಇತರರಿದ್ದರು.