ಪಾಂಡವಪುರ : ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಲಗಿದ್ದ ವ್ಯಕ್ತಿಯೋರ್ವನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಚಿನಕುರಳಿ ಗ್ರಾಮದ ನಿವಾಸಿ ಅರವಿಂದ (24) ಕೊಲೆಯಾದ ವ್ಯಕ್ತಿ. ಈತನ ಸಂಬಂಧಿ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನ ತಿರುಮಲಪುರ ಗ್ರಾಮದ ವಿಜಯ್ ಹತ್ಯೆಗೈದ ಆರೋಪಿ.
ಘಟನೆ ವಿವರ: ಹತ್ಯೆಗೊಳಗಾದ ಅರವಿಂದ ಮತ್ತು ವಿಜಯ್ ಅವರುಗಳು ಸೋದರ ಸಂಬಂಧಿಗಳು. ಆರೋಪಿ ವಿಜಯ್ ಒಂದು ತಿಂಗಳ ಹಿಂದಷ್ಟೇ ಸ್ವಗ್ರಾಮದಿಂದ ಚಿನಕುರಳಿಗೆ ಬಂದು ಅರವಿಂದ ಜೊತೆಯಲ್ಲಿ ವಾಸವಿದ್ದರು. ಚಿನಕುರಳಿ ಗ್ರಾಮದ ರಮೇಶ್ ಎಂಬುವವರಿಗೆ ಸೇರಿದ ಕ್ವಾರಿಯಲ್ಲಿ ಸೈಜ್ ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದರು.
ಕೊಲೆಯಾದ ಅರವಿಂದ ಆರೋಪಿ ವಿಜಯ್‌ಗೆ ಕಳೆದ ಒಂದು ವರ್ಷದ ಹಿಂದೆ ಕೊಟ್ಟಿದ್ದ ರೂ.75ಸಾವಿರ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದ. ಜತೆಗೆ ಅರವಿಂದ ಕೊಲೆ ಆರೋಪಿ ವಿಜಯ್ ಹೆಸರಿನಲ್ಲಿ ಸಾಲದ ಮೇಲೆ ಬೈಕ್ ಖರೀದಿಸಿ, ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಅರವಿಂದನಿಂದ ಬೈಕ್‌ನ್ನು ವಿಜಯ್ ಕಿತ್ತುಕೊಂಡಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ಅರವಿಂದನ ಪತ್ನಿ ಗರ್ಭಿಣಿಯಾದ ಕಾರಣ ತವರು ಮನೆಗೆ ಹೋಗಿದ್ದರು. ಆರೋಪಿ ತನ್ನ ಮತ್ತೊಬ್ಬ ಸ್ನೇಹಿತ ಏಳುಮಲೆಯೊಂದಿಗೆ ಅರವಿಂದನ ಮನೆಯಲ್ಲಿ ಒಟ್ಟಿಗೆ ಮಲಗಿದ್ದರು. ಈ ವೇಳೆ ಕಲ್ಲು ಹೊಡೆಯಲು ಬಳಸುತ್ತಿದ್ದ ಸುತ್ತಿಗೆಯಿಂದ ಗಾಢ ನಿದ್ರೆಯಲ್ಲಿದ್ದ ಅರವಿಂದನ ತಲೆಗೆ ಬಲವಾಗಿ ಹೊಡೆದಿದ್ದರಿಂದ ಅರವಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಬೀಗ ಜಡಿದು ಜತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಏಳುಮಲೆಯೊಂದಿಗೆ ಬೆಳ್ಳೂರು ಕ್ರಾಸ್ ಪೊಲೀಸ್ ಠಾಣೆಗೆ ಹೋಗಿ ಆರೋಪಿ ವಿಜಯ್ ನಡೆದ ವಿಚಾರವನ್ನು ತಿಳಿಸಿ ಶರಣಾಗಿದ್ದಾನೆ.
ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.