ಪಾಂಡವಪುರ: ‘ಕಳೆದ ಎರಡು ವರ್ಷಗಳಿಂದ ನಾವು ಚಿರತೆ ಹಾವಳಿ ಸಮಸ್ಯೆ ಎದುರಿಸುತ್ತಿದ್ದೇವೆ. ಅರಣ್ಯ ಇಲಾಖೆಯವರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. 800 ಎಕರೆಗೂ ಹೆಚ್ಚಿನ ವ್ಯಾಪ್ತಿಯ ಕಾಡಿರುವ ಪ್ರದೇಶವಿದು. ಈ ಕಾಡಿಗೆ ಹೊಂದಿಕೊಂಡಂತೆ ಗ್ರಾಮಗಳಿದ್ದು, ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ’
ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ರೈತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಇಲ್ಲಿನ ಸುತ್ತಮುತ್ತಲಿನ 8 ಗ್ರಾಮಗಳ ಜನರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಎದುರು ತಮ್ಮ ಸಮಸ್ಯೆ ಹೇಳಿಕೊಂಡರು.
ದೊಡ್ಡಬ್ಯಾಡರಹಳ್ಳಿ ಪಂಚಾಯಿತಿ ವ್ಯಾಪ್ತಿಯ ತಿಮ್ಮನಕೊಪ್ಪಲು, ನೊದೆಕೊಪ್ಪಲು, ಚಿಕ್ಕಬ್ಯಾಡರಹಳ್ಳಿ, ತಾಳಶಾಸನ ಸೇರಿದಂತೆ 8 ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಎಚ್.ಡಿ.ಕೋಟೆಯಲ್ಲಿ ಹುಲಿ ದಾಳಿಯ ಹಿನ್ನೆಲೆಯಲ್ಲಿ ಸರ್ಕಾರ ಹಗಲು ಹೊತ್ತು ವಿದ್ಯುತ್ ಪೂರೈಸುವುದಕ್ಕೆ ಕ್ರಮಕೈಗೊಂಡಿದೆ. ಅದೇ ರೀತಿಯಲ್ಲಿ ನಮ್ಮ ಭಾಗದಲ್ಲೂ ಕ್ರಮವಹಿಸಿದರೆ ರೈತರಿಗೆ ಅನುಕೂಲವಾಗುವುದು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಹಗಲು ವಿದ್ಯುತ್ ಪೂರೈಸಲು ಕ್ರಮ: ದರ್ಶನ್
ಚಿರತೆಗಳ ಹಾವಳಿ ಹೆಚ್ಚುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ರೈತರ ಜಮೀನುಗಳಿಗೆ ಹಗಲು ವೇಳೆ ವಿದ್ಯುತ್ ಪೂರೈಸಲು ಸೂಕ್ತ ಕ್ರಮವಹಿಸಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದರು.
ಸೆಸ್ಕ್ ಇಇ ವಿನುತಾ, ಎಇಇ ರವಿಕುಮಾರ್, ಎಇ ಸುಷ್ಮಾ ಅವರು ರೈತರಿಂದ ಮಾಹಿತಿ ಪಡದುಕೊಂಡು ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು.


