ನೂರಡಿ ರಸ್ತೆ ” ಹೆಸರಲಗೆ”ಸಲ್ಲದ ವಿವಾದ
ಮಂಡ್ಯ ನಗರದಲ್ಲಿ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗುಂಡೂರಾವ್ ಉದ್ಯಾನವನದವರೆಗಿನ ರಸ್ತೆಗೆ ಕೆಂಪೇಗೌಡ ರಸ್ತೆ ಎಂದು ಹೆಸರಿಸುವಂತೆ ಒಂದು ಸಮುದಾಯದ ಸಂಘಟನೆಗಳು ನಗರಸಭೆಗೆ ಮನವಿ ಮಾಡಿವೆ.
ಮತ್ತೊಂದೆಡೆ ಇನ್ನೊಂದು ಸಮುದಾಯದ ಸಂಘಟನೆಗಳು ಈಗಾಗಲೇ ಈ ರಸ್ತೆಗೆ ಅಂಬೇಡ್ಕರ್ ರಸ್ತೆಯೆಂದು ೧೯೭೬ ರಲ್ಲಿ ನಗರಸಭೆ ನಿರ್ಣಯ ಕೈಗೊಂಡಿದ್ದು ಅದರಂತೆ ರಸ್ತೆಗೆ ಹೆಸರಲಗೆ ಬರೆಸುವಂತೆ ಒತ್ತಾಯಿಸಿದ್ದಾರೆ.ವಾಸ್ತವದಲ್ಲಿ ಸಾರ್ವಜನಿಕರು ಇವೆರೆಡು ಅಲ್ಲದ ತಮ್ಮದೆ ಆದ ರೀತಿಯಲ್ಲಿ ಈ ರಸ್ತೆಗೆ ನೂರಡಿ ರಸ್ತೆ ಎಂದು ಕರೆಯುತ್ತಾ ಬಂದಿದ್ದಾರೆ.
ರಸ್ತೆಯ ಗಾತ್ರವೆ ಜನರ ಬಾಯಲ್ಲಿ ಹೆಸರಾಗಿದೆ ಇಲ್ಲಿ.
ಯಾವುದೆ ರಸ್ತೆ ಹಾದಿ ಎನ್ನುವಂತದ್ದು ಮುಂದಿನ ದಾರಿ ತೋರುವಂಥದ್ದು.ಆದರೆ ರಸ್ತೆಗಳಿಗೆ ವೃತ್ತಗಳಿಗೆ ಖ್ಯಾತರ ಹೆಸರಿಡುವ ಪದ್ದತಿಯೆ ಅಪ್ರಾಯೋಗಿಕವಾದುದು.
ಈ ರಸ್ತೆಯ ಮುಂದುವರಿದ ಭಾಗಕ್ಕೆ ಜನರು ಬನ್ನೂರು ರಸ್ತೆಯೆಂದು ಕರೆಯುತ್ತಾರೆ.ಕಾರಣ ಅದು ಬನ್ನೂರಿಗೆ ಹೋಗುವ ದಾರಿಯಾಗಿರುವುದೆ ಆಗಿದೆ.
ಮಹನೀಯರ ಆದರ್ಶಗಳನ್ನು ರಸ್ತೆ ವೃತ್ತಗಳಿಗೆ ಅಳವಡಿಸಿ ಅವರ ತತ್ವಗಳಿಗೆ ತಿಲಾಂಜಲಿ ಇಡುವ ಸಂಪ್ರದಾಯ ಈಗ ತುಸು ಹೆಚ್ಚೇ ಇದೆ.
ಮಂಡ್ಯದಲ್ಲಿ ಹೊಳಲು ವೃತ್ತಕ್ಕೆ ಮೊದಲು ಇಂದಿರಾ ಸರ್ಕಲ್ ಎಂಬ ಹೆಸರಿತ್ತು.ನಂತರದಲ್ಲಿ ಅದನ್ನು ಬದಲಿಸಿ ರಾಗಿ ಲಕ್ಷ್ಮಣಯ್ಯನವರ ಹೆಸರಿಡಲಾದರೂ ಜನ ಈಗಲೂ ಅದನ್ನು ಹೊಳಲು ವೃತ್ತವೆಂದೆ ಕರೆಯುತ್ತಾರೆ.ಕಾರಣ ಅದು ಹೊಳಲುಗೆ ಹೋಗುವ ರಸ್ತೆಯಾಗಿದೆ.ಅಂತೆಯೆ ಪೇಟೆಬೀದಿಯ ಕಾಮಣ್ಣನ ಸರ್ಕಲ್ ಗೆ ಎಂಬತ್ತರ ದಶಕದಲ್ಲಿ ಸ್ವತಃ ರಾಜ್ಯಪಾಲ ವೆಂಕಟಸುಬ್ಬಯ್ಯನವರೆ ಕಾವೇರಿ ವೃತ್ತ ಎಂದು ಹೆಸರಿಸಿದರು.ಆದರೆ ಜನರು ಮಾತ್ರ ಕಾಮಣ್ಣನ ಸರ್ಕಲ್ ಎಂದೇ ಕರೆಯುತ್ತಾರೆ.ಅಲ್ಲೀ ಕಾಮದಹನವಾಗುವ ಕಾರಣಕ್ಕೆ ಈ ಹೆಸರು ಬಂದಿದೆ.ಪ್ರತಿಯೊಂದು ಜನಬಳಕೆಯ ರಸ್ತೆ ವೃತ್ತಗಳಿಗೆ ಜನ ತಮ್ಮದೆ ಬಳಕೆಯ ಹೆಸರು ಇಟ್ಟುಕೊಂಡಿದ್ದಾರೆ.ಆ ಹೆಸರುಗಳು ಬರಲು ಅದರದ್ದೆ ಆದ ಐತಿಹ್ಯವಿದೆ.ಅವು ಯಾರೋ ಇಟ್ಟ ಹೆಸರಲ್ಲ.ಯಾರದೊ ಮರ್ಜಿಗೆ ಇಟ್ಟ ಹೆಸರು ಸಹ ಅಲ್ಲ.ಜನ ತಮ್ಮ ದಿನಬಳಕೆಯಲ್ಲಿ ರೂಡಿಸಿಕೊಂಡ ಹೆಸರುಗಳಾಗಿವೆ.ಈ ರೀತಿಯ ನೂರು ಉದಾಹರಣೆಗಳನ್ನು ಕೊಡಬಹುದು.
ಮೈಸೂರಿನ ಪ್ರವೇಶದ ವೃತ್ತಕ್ಕೆ ಜನ ಈಗಲೂ ಕೊಲಂಬಿಯಾ ಸರ್ಕಲ್ ಎಂದೇ ಕರೆಯುತ್ತಾರೆ.ಅಲ್ಲೀಗ ಕೊಲಂಬಿಯಾ ಆಸ್ಪತ್ರೆ ಹೋಗಿ ಮಣಿಪಾಲ್ ಆಸ್ಪತ್ರೆ ಬಂದಿದೆ.ಅಸಲಿಗೆ ಮೈಸೂರು ನಗರಪಾಲಿಕೆ ಕೆಂಪೇಗೌಡ ವೃತ್ತ ಎಂದೇ ನಿರ್ಣಯ ಮಾಡಿದೆ ಸಹ.ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಬೊಮ್ಮಾಯಿ ಅವಧಿಯಲ್ಲಿ ಅಂಬರೀಶ್ ರಸ್ತೆ ಎಂದು ಹೆಸರಿಸಿದರು ಜನರು ರೇಸ್ ಕೋರ್ಸ್ ರಸ್ತೆ ಎಂದೆ ಕರೆಯುತ್ತಾರೆ.ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ಆಗಿದೆ.
ಯಾವುದೆ ಹೆಸರುಗಳನ್ನು ಜನರ ಬಾಯಲ್ಲಿ ಬಲವಂತವಾಗಿ ತುರುಕಲು ಸಾಧ್ಯವಿಲ್ಲ.ಜಾತೀ ಸಂಘಟನೆಗಳು ಇಂತಹ ವಿಷಯಗಳನ್ನು ಮುಂದು ಮಾಡಿಕೊಂಡು ಪರಿಸ್ಥಿತಿಗಳನ್ನು ಇನ್ನಷ್ಟು ವಿಷಮವಾಗಿಸುವುದು ಬೇಡಾ.
ಇದರ ನಡುವೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಎರಡು ಜಾತಿ ಗುಂಪುಗಳಿಗೆ ಒಪ್ಪಿತವಾಗುವಂತೆ ಒಂದು ಸಂಧಾನ ನಡೆಸಿದ್ದಾರೆ ಅದಕ್ಕೆ ಎರಡು ಜಾತಿ ಗುಂಪುಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗುತ್ತಿದೆ.ಬೆಸಗರಹಳ್ಳಿ ವೃತ್ತದಿಂದ ಗುಂಡುರಾವ್ ಉದ್ಯಾನದವರೆಗೆ ಅಂಬೇಡ್ಕರ್ ರಸ್ತೆ ಎಂತಲೂ ಅಲ್ಲಿಂದ ಮುಂದಿನ ರಸ್ತೆ ಕೆಂಪೇಗೌಡ ರಸ್ತೆ ಎಂದು ರಾಜೀ ಕಬೂಲಿ ನಡೆಸಲಾಗಿದೆ ಎಂಬ ಮಾಹಿತಿಯಿದೆ.
ಯಾವುದಾದರೂ ಹೊಸ ರಸ್ತೆ ಬಡಾವಣೆಗಳಿಗೆ ಹೊಸದಾಗಿ ಹೆಸರಿಟ್ಟು ಜನರ ಬಾಯಲ್ಲಿ ಬರುವಂತೆ ಮಾಡಿಸುವಷ್ಟು ಇದು ಸುಲಭದ ಕೆಲಸವಲ್ಲ.ಆದರೂ ಎರಡು ಜಾತಿ ಗುಂಪುಗಳಿಗೆ ಸಮಾಧಾನವಾಗುವಂತೆ ಸ್ಥಳೀಯ ಶಾಸಕರು ನೇತೃತ್ವ ವಹಿಸಿದ್ದು ಉತ್ತಮ ಬೆಳವಣಿಗೆಯೆ ಸರಿ.ಇಲ್ಲದಿದ್ದರೆ ಈಗಾಗಲೇ ಮದ್ದೂರಿನಲ್ಲಿ ಮತಾಂಧರು ಜನರ ಮಧ್ಯೆ ಬಿತ್ತುತ್ತಿರುವ ಕಂದಕ ದೊಡ್ಡದು.ಅದು ಇಲ್ಲಿ ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು.ರಾಷ್ಟಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಬಗೆಗೆ ಅದೇ ಗೌರವನ್ನಿರಿಸುತ್ತಾ.ಬಡಾವಣೆಗಳಿಗೆ ಹೆಸರಿಡುವಾಗ ರಾಷ್ಟೀಯ ವ್ಯಾಧಿಗೆ ಅಂಟಿಕೊಳ್ಳುವುದು ಬೇಡಾ.ಯಾವ ಊರಿಗೆ ಹೋದರು ಗಾಂಧಿನಗರ.ಸುಭಾಷ್ ನಗರ.ನೆಹರು ನಗರಗಳೆ ಇವೆ ಕನ್ನಡ ನಾಡಿಗೆ ಕೊಡುಗೆ ಕೊಟ್ಟವರ ಹೆಸರುಗಳಿಗೂ ಆದ್ಯತೆ ಇರಲಿ.ಕನ್ನಡ ಒಂದು ಭಾಷೆಯೆ ಅಲ್ಲ ಅದು ತಮಿಳಿನ ಒಂದು ಒರಟಾದ ರೂಪ ಎಂದ ತಮಿಳು ಬ್ರಾಹ್ಮಣ ರಾಜಕಾರಿಣಿ ರಾಜಗೋಪಾಲ ಚಾರಿಯ ಹೆಸರನ್ನು ರಾಜಾಜೀ ನಗರ ಮಾಡಿಕೊಂಡಿರುವ ಅಭಿಮಾನ ಶೂನ್ಯ ಕನ್ನಡಿಗರು ಇನ್ನಾದರೂ ರಸ್ತೆ ಬಡಾವಣೆಗಳಿಗೆ ಹೆಸರಿಡುವಾಗ ನಾಡು ನುಡಿಗೆ ದುಡಿದವರ ಹೆಸರುಗಳಿಗೆ ಆದ್ಯತೆ ಕೊಡಲಿ.ವಿವಾದಕ್ಕೆ ಆಸ್ಪದ ಇಲ್ಲದಂತೆ ಬಗೆಹರಿಸಿದ ಎರಡು ಜಾತಿ ಸಂಘಟನೆಗಳ ಮುಖಂಡರೂ ಹಾಗೂ ಶಾಸಕರ ಕ್ರಮ ಶ್ಲಾಘನೀಯವಾಗಿದೆ.