ಪಾಂಡವಪುರ:ಸೆ.೧೨. ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಲಂಚದ ಬೇಡಿಕೆ ಇಡುತ್ತಿದ್ದು, ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಪುರಸಭೆ ಕಚೇರಿ ಎದುರು ಜಮಾಯಿಸಿದ ಮುಖಂಡರು, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪುರಸಭೆಯನ್ನು ಉಳಿಸಬೇಕಿದೆ. ಪುರಸಭೆ ಆಸ್ತಿ ಅನ್ಯರ ಪಾಲಾಗುತ್ತಿದ್ದರೂ ಯಾವುದೇ ಕ್ರಮವಹಿಸಲು ಮುಂದಾಗುತ್ತಿಲ್ಲ. ಪುರಸಭೆ ಉಳಿಯಬೇಕಾದರೆ ಮುಖ್ಯಾಧಿಕಾರಿ ಹಠಾವೋ ಪುರಸಭೆ ಬಚಾವೋ ಎಂಬ ಹೋರಾಟ ಅನಿವಾರ್ಯವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಮಾತನಾಡಿ, ನಿರ್ಮಲ ಕಾನ್ವೆಂಟ್ ಬಳಿ ಮತ್ತು ಡಿಸಿಸಿ ಬ್ಯಾಂಕ್ ಮುಂಭಾಗ ಜಾಗವು ಪುರಸಭೆಗೆ ಸೇರಿದ್ದಾಗಿದೆ ಎಂದು ಹೈಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದ್ದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಪುರಸಭೆ ಹಿಂಭಾಗದಲ್ಲಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳ ನಡುವೆ ವ್ಯಾಜ್ಯ ನಡೆಯುತ್ತಿದ್ದರೂ ಮೂರನೇ ವ್ಯಕ್ತಿಗೆ ಅಕ್ರಮ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದ ಅವರು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಈ ಬಗ್ಗೆ ಗಮನಹರಿಸಿ ಪುರಸಭೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಯುಜಿಡಿ, ಕಸ ವಿಲೇವಾರಿ, ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಪುರಸಭೆ ವ್ಯಾಪ್ತಿಯಲ್ಲಿವೆ. ಪುರಸಭೆ ಅಧಿಕಾರಿಗಳು ಯಾವ ಕ್ರಮವನ್ನು ವಹಿಸುತ್ತಿಲ್ಲ. ಪ್ರತಿಯೊಂದಕ್ಕೂ ಸಾರ್ವಜನಿಕರು ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಪುರಸಭೆಗೆ ಕೆಟ್ಟ ಹೆಸರು ಬರುತ್ತಿದೆ. ಈಗಿನ ಮುಖ್ಯಾಧಿಕಾರಿ ಸತೀಶ್ ಕುಮಾರ್ ಈ ಹಿಂದೆ ಕೆ.ಆರ್.ಪೇಟೆ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಸರ್ಕಾರ ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಎಸಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿ, ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರೀಗೌಡ, ಮುಖಂಡರಾದ ಹಿರೇಮರಳಿ ದೊರೆಸ್ವಾಮಿ, ಶ್ರೀನಿವಾಸ್, ವಿಷ್ಣುವಿಠಲ, ಬಾಲಗಂಗಾಧರ್, ಹಿರೋಡೆ ಬೀದಿ ಕೇಶವ ಶ್ರೀನಿವಾಸ್ ನಾಯ್ಕ, ಆನಂದ ಇದ್ದರು.