ಶ್ರೀರಂಗಪಟ್ಟಣ: ವಾಹನ ಡಿಕ್ಕಿಯಿಂದ ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಗುರುವಾರ ನಡೆದಿದೆ.
ಗೌಡಹಳ್ಳಿ ಕಡೆಯಿಂದ ಸಬ್ಬನಕುಪ್ಪೆ ಅರಣ್ಯ ಪ್ರದೇಶದತ್ತ ಬರಲು ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ ವೇ ದಾಟುವ ವೇಳೆ ಚಿರತೆಗೆ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಡಿಎಫ್ಒ ರಘು ಇತರ ಅಧಿಕಾರಿಗಳು ಭೇಟಿ ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಟಿ.ಎಂ. ಹೊಸೂರು ಅರಣ್ಯ ಸಸ್ಯ ಕ್ಷೇತ್ರದ ಬಳಿ ಚಿರತೆಯ ಕಳೇಬರವನ್ನು ಸುಟ್ಟು ಹಾಕಲಾಯಿತು ಎಂದು ಡಿಆರ್ಎಫ್ಒ ಬಿ.ಎಂ. ನಾಗರಾಜ್ ತಿಳಿಸಿದರು.
ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ ವೇ ನ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಿಸಿದ್ದು, ವನ್ಯ ಜೀವಿಗಳು ರಸ್ತೆ ದಾಟಲು ಅಡ್ಡಿಯಾಗಿದೆ. ಗೌಡಹಳ್ಳಿ ಗೇಟ್ ಸಮೀಪ ವೈಲ್ಡ್ ಲೈಫ್ ಕಾರಿಡಾರ್ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಿ ವನ್ಯಜೀವಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಈ ಹಿಂದೆ ಸಹ ಇದೇ ಮಾರ್ಗದಲ್ಲಿ ರಸ್ತೆ ದಾಟುತ್ತಿದ್ದ ಜಿಂಕೆಯೊಂದು ಅಪರಿಚಿತ ವಾಹನಕ್ಕೆ ಬಲಿಯಾಗಿತ್ತು.ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದ ನಂತರ ಆನೆ ಮೊದಲಾದವು ಹಾದಿ ತಪ್ಪಿ ನಾಡಿಗೆ ಬರುವುದು ಜಿಂಕೆ ಚಿರತೆಗಳು ರಸ್ತೆಯಲ್ಲಿ ಅಪಘಾತಕೀಡಾಗಿ ಸಾವನ್ನಪ್ಪುವುದು ಸಾಮಾನ್ಯ ಸಂಗತಿಯಾಗಿದೆ.ಹೆದ್ದಾರಿ ಪ್ರಾಧಿಕಾರ ಅರಣ್ಯ ಜೀವಿಗಳ ಮುಕ್ತ ಓಡಾಟಕ್ಕೆ ಸಂಚಕಾರ ತಂದಿರುವ ಜತೆಗೆ ಇವುಗಳ ಓಡಾಟಕ್ಕೆ ಅಗತ್ಯ ಸೇತುವೆಗಳನ್ನು ನಿರ್ಮಿಸದಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.


