ದಿನಾಂಕ 9.12.2025ರ ಮಂಗಳವಾರ ಸಂಜೆ 6 ಗಂಟೆಗೆ ಮಂಡ್ಯ ನಗರದ ಶಿವನಂಜಪ್ಪ ಪಾರ್ಕ್ನಲ್ಲಿ ಕನ್ನಡ ಸಾಹಿತ್ಯಲೋಕದ ಮೇರುಶಿಖರ ಕೆ.ವಿ.ಪುಟ್ಟಪ್ಪನವರ ಸ್ಮರಣಾರ್ಥ ‘ನೆನಪಿನ ದೋಣಿಯಲಿ ಕುವೆಂಪು’ ಕಾರ್ಯಕ್ರಮ ಆಯೋಜಿಸಲಾಗಿದೆ.
ಪರಿಚಯ ಪ್ರಕಾಶನದ ಓದಿನಹಾದಿಯ 6ನೇ ಸಂಚಿಕೆಯ ನಿಮಿತ್ತ ಓದು, ಹರಟೆ, ಹಾಡು ಮತ್ತು ಕನ್ನಡ ಸಾಹಿತ್ಯಲೋಕದ ಅಚಾರ್ಯ ಕುವೆಂಪು ಅವರ ನೆನಪುಗಳ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿಯಲಿ’ ಕೃತಿಯ ಕುರಿತು ನಾಗಮಂಗಲದ ಜನಪರ ವಕೀಲ, ವಾಗ್ಮಿ ಜೀರಹಳ್ಳಿ ರಮೇಶ್ ಗೌಡರು ಉಪನ್ಯಾಸ ನೀಡಲಿದ್ದಾರೆ.

‘ಮಲೆನಾಡಿನ ಚಿತ್ರಗಳು’ ‘ವಿಚಾರ ಕ್ರಾಂತಿಗೆ ಆಹ್ವಾನ’ ಓದು
ಪ್ರಕೃತಿಯೊಂದಿಗೆ ಕುವೆಂಪು ಅವರ ಅವಿನಾಭಾವವನ್ನು ತೆರೆದಿಡುವ ‘ಮಲೆನಾಡಿನ ಚಿತ್ರಗಳು’ ಕೃತಿಯ ಕುರಿತು ಹಿರಿಯ ಸಾಹಿತಿ, ರಾಜ್ಯ ಯುವ ಬರಹಗಾರರ ಬಳಗದ ಮುಖ್ಯಸ್ಥರಾದ ಸತೀಶ್ ಜವರೇಗೌಡ ಅವರು ಮಾತನಾಡಲಿದ್ದಾರೆ. ನಂತರ ಕನ್ನಡ ನಾಡಿನ ಎರಡು ತಲೆಮಾರಿಗೆ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಪುಸ್ತಕದ ಕುರಿತು ಚಿಂತಕ ಹಾಲಹಳ್ಳಿ ಮುಕುಂದ ಅವರು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕರಾದ ಶಿವಕುಮಾರ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುವೆಂಪು ಸಂಗೀತ ಸುಧೆ, ಕವಿತೆಗಳ ವಾಚನ
ಇದೇ ಸಂದರ್ಭದಲ್ಲಿ ಸಂಜೆ ಐದು ಗಂಟೆಯಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ರಸ ಋಷಿ ಕುವೆಂಪು ಅವರ ಪ್ರಸಿದ್ಧ ಗೀತೆಗಳನ್ನು ಮಂಡ್ಯ ಜಿಲ್ಲೆಯ ಹೆಮ್ಮೆಯ ಹಾಡುಗಾರರಾದ ಗಾಮನಹಳ್ಳಿ ಸ್ವಾಮಿ, ಪ್ರತಿಭಾಂಜಲಿ ಡೇವಿಡ್ ಮತ್ತು ಎಚ್.ಎನ್.ದೇವರಾಜು ಅವರು ಪ್ರಸ್ತುತಪಡಿಸಲಿದ್ದು, ಉಪನ್ಯಾಸಕಿ ಮತ್ತು ಕವಯತ್ರಿ ಆಶಾ ಹನಿಯಂಬಾಡಿ ಅವರು ಕುವೆಂಪು ಅವರ ಪ್ರೇಮ ಕವಿತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀ ಕುವೆಂಪು ಅವರ 121ನೇ ಜನ್ಮದಿನದ ಹಿನ್ನೆಲೆಯಲ್ಲಿ ಕುವೆಂಪು ಅವರ ಕನ್ನಡ ಪ್ರಜ್ಞೆ ಮತ್ತು ವೈಚಾರಿಕ ಚಿಂತನೆಗಳನ್ನು ಹೊಸತಲೆಮಾರಿಗೆ ಪಸರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಕುವೆಂಪು ಅವರ ಸಾಹಿತ್ಯಾಭಿಮಾನಿಗಳು ಭಾಗವಹಿಸಬಹುದು ಎಂದು ಪರಿಚಯ ಪ್ರಕಾಶನ ತಿಳಿಸಿದೆ


