ಮಂಡ್ಯ: ಸೆ.೧೩.ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಶಾಸನ ಬದ್ಧ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಸೆ.15ರಿಂದ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಸಂಘಟನಾ ಕಾರ್ಯದರ್ಶಿ ನಾಗರಾಜು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರಕಾರ ಯುಜಿಸಿ ಮತ್ತು ಯುಜಿಸಿಯೇತರ ಎಂಬ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 11 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 5,623 ಮಂದಿ ಯುಜಿಸಿ ಅರ್ಹತೆ ಪಡೆದಿದ್ದು, 5,353 ಮಂದಿ ಅರ್ಹತೆ ಪಡೆದಿರುವುದಿಲ್ಲ. ಅರ್ಹತೆ ಪಡೆಯದವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಮಾತ್ರಕ್ಕೆ ಅವರು ಪಾಠ-ಪ್ರವಚನದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ ಎಂದು ಹೇಳಿದರು.
ಜೊತೆಗೆ ಒಬ್ಬ ತಾತ್ಕಾಲಿಕ ನೌಕರನ ಸ್ಥಾನವನ್ನು ಮತ್ತೋರ್ವ ತಾತ್ಕಾಲಿಕ ನೌಕರ ಸ್ಥಳಾಂತರಿಸಲು ಅವಕಾಶ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತಮ್ಮನ್ನು ಸೇವೆಯಿಂದ ತೆರವು ಮಾಡದಿರಲು 2024-25ನೇ ಸಾಲಿನ ಅತಿಥಿ ಉಪನ್ಯಾಸಕರು ತಡೆಯಾಜ್ಞೆ ತಂದ್ದಾರೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ನೇಮಕ ಮಾಡದೇ ಕಳೆದ ಒಂದೂವರೆ ತಿಂಗಳಿನಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ನಡೆಯುತ್ತಿಲ್ಲ. ನೇಮಕ ಮಾಡದ ಕಾರಣ ವಿದ್ಯಾರ್ಥಿಗಳ ಜೊತೆಗೆ ಅತಿಥಿ ಉಪನ್ಯಾಸಕರೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಅತಿಥಿ ಉಪನ್ಯಾಸಕರ ನೇಮಕಾತಿ ಬಿಕ್ಕಟ್ಟನ್ನು ಸರಕಾರ ಹಂತದಲ್ಲೇ ಶಾಸನಬದ್ಧ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವಾರಿರ‍್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜು ಮಾತನಾಡಿ, ಅತಿಥಿ ಉಪನ್ಯಾಸಕರಾಗಿ ಹತ್ತಾರು ವರ್ಷಗಳ ಸೇವಾ ಹಿರಿತನವನ್ನು ಪರಿಗಣಿಸಿ ನೇಮಕ ಮಾಡಿಕೊಳ್ಳಬೇಕು. ಇಲಾಖೆಯು ಯಾವುದೇ ಅತಿಥಿ ಉಪನ್ಯಾಸಕರ ನೂತನ ಖಾಯಂ ನೇಮಕಾತಿ, ವರ್ಗಾವಣೆ, ನಿಯೋಜನೆ ಸಂದರ್ಭದಲ್ಲಿ ಅಥವಾ ಕಾರ್ಯಭಾರದ ಕೊರತೆಯ ಸಂದರ್ಭದಲ್ಲಿ ಮಾತ್ರ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ರಾಷ್ಟೀಯ ಅಹಿಂದ ಸಂಘಟನೆಗಳ ಹೋರಾಟ ಸಮಿತಿ ರಾಷ್ಟೀಯ ಅಧ್ಯಕ್ಷ ಎಂ.ನಿಂಗಯ್ಯ ಮಾತನಾಡಿ, ಸೀಮಿತ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ಸರಕಾರ ಮುಂದಾಗಿ ತೀರ್ಮಾನ ಕೈಗೊಳ್ಳದಿದ್ದರೆ. ಸೆ.15ರಿಂದ ಮೈಸೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದು ಮಾತ್ರವಲ್ಲ. ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮಹಿಳಾ ಸಂಯೋಜಕಿ ಹರ್ಷಿತಾ, ಜಿಲ್ಲಾ ಕಾರ್ಯದರ್ಶಿ ವಿನಯ್, ವಸಂತ್ ಇದ್ದರು.