ನಗರದೊಳಗಿನ ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಮೂಹೂರ್ತ
ಮಂಡ್ಯ ನಗರದಲ್ಲಿ ಹಾದು ಹೋಗುವ ಬೆಂಗಳೂರು ಮೈಸೂರು ಹೆದ್ದಾರಿಯುದ್ದಕ್ಕು ಒತ್ತುವರಿಯಾಗಿರುವ ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆ ನಗರಸಭೆ ಮತ್ತು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಇಂದು ವಿದ್ಯುಕ್ತ ಚಾಲನೆ ನೀಡಿದೆ.
ಕೇಂದ್ರ ಸರಕಾರ ನಗರದ ವ್ಯಾಪ್ತಿಯಲ್ಲಿನ ಹೆದ್ದಾರಿಯ ನಿರ್ಮಾಣಕ್ಕೆ ಹನ್ನೊಂದು ಕೋಟಿ ಬಿಡುಗಡೆ ಮಾಡಿ ಹೊರವಲಯದ ಅಮರಾವತಿ ಹೋಟೆಲ್ ನಿಂದ ಜ್ಯೋತಿ ಇಂಟರ್ ನ್ಯಾಶನಲ್ ಹೋಟೆಲ್ ವರೆಗೆ ರಸ್ತೆ ನಿರ್ಮಾಣ ಹಾಗೂ ನಗರದ ವ್ಯಾಪ್ತಿಯೊಳಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ೧೧ ಕೋಟಿ ಬಿಡುಗಡೆ ಮಾಡಿತ್ತು.
ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸದೆ ಕಾಮಗಾರಿ ಮಾಡದಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರುನಾಡ ಸೇವಕರು ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಜಂಟೀಯಾಗಿ ಪ್ರತಿಭಟನೆ ನಡೆಸಿದ್ದವು.
ಸಾಕಷ್ಟು ರಾಜಕೀಯ ಒತ್ತಡದ ಕಾರಣಕ್ಕೆ ಒತ್ತುವರಿ ತೆರವು ನನೆಗುದಿಗೆ ಬಿದ್ದಿತ್ತು.ಒತ್ತುವರಿ ತೆರವುಗೊಳಿಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲವೆಂದು ಸಂಘಟನೆಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಡ್ಯ ನಗರಸಭೆ ಜಂಟಿಯಾಗಿ ಮೊದಲಿಗೆ ನಂದಾ ವೃತ್ತದಿಂದ ಮಹವೀರ ವೃತ್ತದವರೆಗೆ ಒತ್ತುವರಿಯಾಗಿರುವ ಪಾದಚಾರಿ ಮಾರ್ಗದ ಗಡಿಯನ್ನು ಗುರುತಿಸಿತು.ಹೆದ್ದಾರಿಯ ಮಧ್ಯ ಭಾಗದಿಂದ ೨೦ ಮೀಟರ್ ಅಂತರದವರೆಗೆ ಯಾವುದೆ ಕಟ್ಟಡ ನಿರ್ಮಾಣವನ್ನು ಅಕ್ರಮ ನಿರ್ಮಾಣ ಎಂದೇ ಸುಪ್ರೀಂಕೋರ್ಟ್ ಸಹ ವ್ಯಾಖ್ಯಾನಿಸಿದ್ದು.ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ ಏಳು ದಿನಗಳೊಳಗೆ ಸ್ವಯಂಪ್ರೇರಿತವಾಗಿ ತೆರವು ಮಾಡಲು ಅವಕಾಶ ಕಲ್ಪಿಸಲಾಯಿತು.
ಇದೇ ಸಂಧರ್ಭದಲ್ಲಿ ಪಾದಚಾರಿ ಮಾರ್ಗದುದ್ದಕ್ಕು ಅಳವಡಿಸಿದ್ದ ಖಾಸಗಿ ಹೆಸರಲಗೆಗಳನ್ನು ಕಿತ್ತೊಗೆಯಲಾಯಿತು.
ಕಾರ್ಯಾಚರಣೆಯಲ್ಲಿ ನಗರಸಭೆ ಅಭಿಯಂತರ ಮಹೇಶ್.ಆರೋಗ್ಯ ನಿರೀಕ್ಷಕ ಚಲುವರಾಜು ಮತ್ತು ನಗರಸಭೆ ಸಿಬ್ಬಂದಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.ಕಾರ್ಯಾಚರಣೆಗೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಸಂಘಟನೆಗಳ ಹೋರಾಟಕ್ಕೆ ಮಣಿದು ಆರಂಭಿಸಿರುವ ಒತ್ತುವರಿ ತೆರವು ಕಾರ್ಯವನ್ನು ಯಾವುದೆ ರಾಜಕೀಯ ಒತ್ತಡಕ್ಕೆ ಮಣಿಯದೆ ಮುಂದುವರಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾದಚಾರಿ ಮಾರ್ಗ ನಿರ್ಮಿಸಬೇಕು.ಸ್ಥಳೀಯ ಶಾಸಕರು ಅಭಿವೃದ್ದಿ ಪರವಾಗಿರುವುದರಿಂದ ಅವರ ಬೆಂಬಲದೊಂದಿಗೆ ಕಾರ್ಯಚರಣೆ ಮುಂದುವರೆಯಲಿ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದ್ದಾರೆ.


