ಮಂಡ್ಯ: ಆ.೯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್ನಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಾಲ್ಮೀಕಿ ಮತ್ತು ಮುಡಾ ಹಗರಣದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದೇವೆ.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀವು ಮಾತನಾಡಿ, ನಿಮಗೆ ಉತ್ತರ ಕೊಡುವ ದಾಖಲೆಗಳು ನಮ್ಮಲ್ಲಿವೆ ಎಂದು ತಿಳಿಸಿದರು.
ನಾನು ವಿಧಾನಮಂಡಲದಲ್ಲಿ 3 ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದೇನೆ.ಸಂತೆ ಭಾಷಣ ಮಾಡಲಿಲ್ಲ .ದಾಖಲೆ ಸಮೇತ ಹೇಳಿದ್ದೇನೆ ಎಂದರು.
ಮುಡಾ ಹಗರಣದ ಬಗ್ಗೆಯೂ ನಿಲುವಳಿ ಸೂಚನೆ ಮಂಡಿಸಲಾಗಿತ್ತು. ಆದರೆ ಅವಕಾಶ ಸಿಗಲಿಲ್ಲ. ಮುಖ್ಯಮಂತ್ರಿಗಳು ಅವಕಾಶ ನೀಡದೆ ಪಲಾಯನ ಮಾಡಿದರು .ಒಂದು ವೇಳೆ ಅವಕಾಶ ನೀಡಿದ್ದರೆ ಪಾದಯಾತ್ರೆ ಬಗ್ಗೆ ಚಿಂತನೆ ನಡೆಸಬಹುದಿತ್ತು ಎಂದರು.
ವಾಲ್ಮೀಕಿ. ನಿಗಮದಲ್ಲಿ ಲೂಟಿ ಹೊಡೆದ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವರು ಜೈಲಿನಲ್ಲಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಅವರು ಬಿಚ್ಚಿಡುತ್ತೇನೆ,ಬಿಚ್ಚಿಡುತ್ತೇನೆ ಎನ್ನುತ್ತಿದ್ದಾರೆ .ಅವರು ನಮ್ಮ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಎಲ್ಲವನ್ನು ಬಿಚ್ಚಿಡಬಹುದಿತ್ತು. ಆದರೆ ಏನನ್ನು ಮಾಡಲಿಲ್ಲ ಎಂದರು .
ವಿಧಾನಸಭೆಯಲ್ಲಿ ನಿಲುವಳಿ ಮಂಡನೆಗೆ ಅವಕಾಶ ವಂಚನೆ ಮಾಡಿದ ಕಾರಣ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆದರೆ ಇವರು ಆಡಳಿತ ಪಕ್ಷದವರಾಗಿ ಯಾಕೆ ಸಮಾವೇಶ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ದಾಖಲೆ ನೀಡಿದ್ದರೆ ಇಷ್ಟೆಲ್ಲ ಮಾಡುವ ಅವಶ್ಯವಿರಲಿಲ್ಲ ಎಂದು ತಿಳಿಸಿದ ಅವರು, ರೀಡೂ ಮಾಡಿದ್ದು ಅವರಿಗೆ ಕಪ್ಪು ಚುಕ್ಕೆ ಅಲ್ಲವೇ ಎಂದು ಮತ್ತೊಮ್ಮೆ ಪ್ರಶ್ನಿಸಿದರು.
ಬೊಮ್ಮಾಯಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು .ಆದರೆ ಅವರು ಈ ಬಗ್ಗೆ ವಿರೋಧ ಪಕ್ಷದವರಾಗಿ ದಾಖಲೆಯನ್ನು ಬಿಡುಗಡೆ ಮಾಡಬಹುದಿತ್ತು .ಆಗ ಮಾಡದೆ ಈಗ ಅಧಿಕಾರದಲ್ಲಿರುವಾಗ ಬಿಜೆಪಿ ಮೇಲೆ ಆಪಾದನೆ ಮಾಡಿದರೆ ಜನರು ಇದಕ್ಕೆ ಬೆಲೆ ಕೊಡುತ್ತಾರಾ ಎಂದು ಪ್ರಶ್ನಿಸಿದರು .
ಕಾಂಗ್ರೆಸ್ ಅಧಿಕಾರಕ್ಕೆ ಬಂದು 14 ತಿಂಗಳಿನಲ್ಲಿ ಮಾಡಿರುವ ಅವ್ಯವಹಾರದ ಬಗ್ಗೆ ಪುಸ್ತಕ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ ಅವರು ,ಕಾಂಗ್ರೆಸ್ ಪಕ್ಷ ಬ್ರಾಂಡ್ ಬೆಂಗಳೂರನ್ನು ಬ್ಯಾಡ್ ಮಾಡಿದೆ. ಹಿಂದೂ ಯುವಕರ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಬರ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು . ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೂ ಮುನ್ನ ಆ ಪಕ್ಷದ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ . ಕಾಂಗ್ರೆಸ್ ಪಕ್ಷ ನಡೆಸುತ್ತಿರುವುದು ಜನಾಂದೋಲನ ಸಮಾವೇಶ ಅಲ್ಲ . ಬದಲಿಗೆ ಜನರಿಗೆ ಮೋಸ ಮಾಡುವ ಆಂದೋಲನ ಆಗಿದೆ ಎಂದು ಜರಿದರು .
ಇದೇ ಸಂದರ್ಭದಲ್ಲಿ ಭ್ರಷ್ಟ ಕಾಂಗ್ರೆಸ್ ಹಗರಣಗಳ ಸರ್ಕಾರ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್, ಮಾಧ್ಯಮ ಸಂಚಾಲಕ ನಾಗೇಶ್ ,ಶಾಸಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ವಕ್ತಾರ ಸಿಟಿ ಮಂಜುನಾಥ್, ಕನಕ ಮೂರ್ತಿ, ನಾಗನಂದ್ ಉಪಸ್ಥಿತರಿದ್ದರು