ಮಂಡ್ಯ: ಈ ಸೋಲು ನನ್ನ ಸೋಲಲ್ಲ ಬದಲಿಗೆ ಶಿಕ್ಷಕರ ಸೋಲಾಗಿದೆ ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ನನ್ನ ಕ್ಷೇತ್ರದ ನಾಲ್ಕು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದರು. ಆದರೆ ಗೆಲುವು ಸಾಧಿಸಲು ಆಗಲಿಲ್ಲ ಎಂದು ವಿಷಾದಿಸಿದರು. ಈ ಚುನಾವಣೆ ನನಗೆ ಮಹತ್ವದ ಚುನಾವಣೆಯಾಗಿತ್ತು .ನಾಲ್ಕು ಬಾರಿ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳುಹಿಸಿದ್ದರು. ಎಲ್ಲಾ ಸಂದರ್ಭದಲ್ಲೂ ನಾನು ವಿರೋಧ ಪಕ್ಷದಲ್ಲಿದ್ದೆ .ಆದರೆ ಪ್ರಸ್ತುತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಈ ಪಕ್ಷದಿಂದ ಸ್ಪರ್ಧೆ ಮಾಡಿ ತಮ್ಮನ್ನು ಬೆಂಬಲಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದ್ದೆ ಎಂದರು .
ದೀರ್ಘಕಾಲದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಅವಕಾಶ ಈ ಬಾರಿ ಸಿಕ್ಕಿತು .ಆದರೆ ಬಹುತೇಕ ಶಿಕ್ಷಕರು ಸೋಲು ಉಂಟು ಮಾಡಿದ್ದಾರೆ .ಆದರೂ ಸಾಕಷ್ಟು ಮಂದಿ ಮತ ಹಾಕಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು .
ಸೋಲು ಗೆಲುವು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಆಡಳಿತ ಪಕ್ಷದಲ್ಲಿ ಇರುವಾಗ ಸೋಲಾಗಿದ್ದು ,ಇದು ನನ್ನ ಸೋಲಲ್ಲ .ಬದಲಿಗೆ ಶಿಕ್ಷಕರ ಸೋಲಾಗಿದ್ದು ಶಿಕ್ಷಕರು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ನಾನು ಶಿಕ್ಷಕರ ಪರ ಕೆಲಸ ಮಾಡಿದ್ದೇನೆ .ಶಿಕ್ಷಕರಿಗೆ ಅವಮಾನ ಮಾಡುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿಗಳು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು. ಶಾಸಕರು ಎಲ್ಲಾ ಕಡೆಗಳಲ್ಲಿಯೂ ಪ್ರಚಾರ ಮಾಡಿದ್ದಾರೆಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನಾನು ಎಲ್ಲ ಸಮುದಾಯ ಮತ್ತು ವೃಂದದ ಹಿತ ಕಾಯುವ ಕೆಲಸ ಮಾಡಿದ್ದೇನೆ. ಶಿಕ್ಷಕರನ್ನು ನಿರ್ಲಕ್ಷಿಸಿಲ್ಲ. ಶಿಕ್ಷಕರನ್ನು ಗೌರವಿಸಿದ್ದೇನೆ .ಇವರಿಗೆ ನೀಡಿರುವ ಗೌರವವನ್ನು ಯಾರಿಗೂ ನೀಡಿಲ್ಲ ಎಂದರು .
ಗೋಷ್ಟಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡಿ ಗಂಗಾಧರ್, ಶಂಕರೇಗೌಡ ,ಗುರುಮೂರ್ತಿ, ಶಿವರುದ್ರ ಸೇರಿದಂತೆ ಇತರದಿದ್ದರು.