ಮಂಡ್ಯ:ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃದಲ್ಲಿ ಏಳು ಮಂದಿ ನ್ಯಾಯಾಧೀಶರು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಬಗ್ಗೆ ನೀಡಿರುವ ಆದೇಶವನ್ನು ಕೂಡಲೇ ಜಾರಿಗೆ ತರಲು ಕ್ರಮ ವಹಿಸಬೇಕೆಂದು ಮುಖಂಡ ಬಿ ಕೃಷ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದಲ್ಲಿ ಏಳು ಮಂದಿ ನ್ಯಾಯಾಧೀಶರು ಒಳ ಮೀಸಲಾತಿ ನೀಡುವ ಸಂಬಂಧ ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ತಿಳಿಸಿದೆ. ಹಾಗಾಗಿ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರ ತುರ್ತಾಗಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ತುಳಿತಕ್ಕೆ ಒಳಗಾದವರು ,ಶೋಷಿತ ಸಮಾಜಗಳ ಏಳಿಗೆಗಾಗಿ ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಆದಿ ಜಾಂಬವ ಸಂಘ ಸೇರಿದಂತೆ ಹಲವು ಸಂಘಟನೆಗಳು ಹಲವಾರು ವರ್ಷಗಳಿಂದ ಹೋರಾಟ ನಡೆಸಿದೆ. ನ್ಯಾಯಾಲಯದ ಈ ಆದೇಶ ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ಈ ಹಿಂದೆ ನ್ಯಾಯಮೂರ್ತಿ ಸದಾಶಿವಯ್ಯ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ತರಿಸಿಕೊಂಡಿದ್ದರು. ಆದರೆ ಆ ವರದಿಯನ್ನು ಯಾರು ಪರಿಗಣಿಸಲಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಧವ್ ಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು .ಇತರರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಕೂಲಂಕುಶವಾಗಿ ಪರಿಶೀಲಿಸಿ ಈ ಆದೇಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ .ಆದ್ದರಿಂದ ಈ ಆದೇಶವನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಆದಿ ಜಾಂಬವ ಸಂಗದ ಜಿಲ್ಲಾಧ್ಯಕ್ಷ ಕನಲಿ ಚನ್ನಪ್ಪ ,ಕಾರ್ಯದರ್ಶಿ ಗವಿ ಸೇರಿದಂತೆ ಇತರರಿದ್ದರು.