ಮಂಡ್ಯ : ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಬಾರದು ಎಂದು ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್ ತಾಕೀತು ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದಿಂದ ಕನ್ನಡಿಗರಿಗೆ ಉದ್ಯೋಗ ಪಡೆಯಲು ಅನುಕೂಲವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ತೆಗೆದುಕೊಂಡಿರುವ ನಿರ್ಣಯದಿಂದ ಹಿಂದೆ ಸರಿಯಬಾರದು ಎಂದು ಆಗ್ರಹ ಪಡಿಸಿದರು.
ದಶಕಗಳಿಂದ ಖಾಸಗಿ ವಲಯದ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು . ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವಲಯಗಳಲ್ಲಿ ಶೇಕಡ 70ರಷ್ಟು ಹಾಗೂ ಎ ಮತ್ತು ಬಿ ಹುದ್ದೆಗಳಿಗೆ ಶೇಕಡ 50 ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನ ಸಮಂಜಸವಾಗಿದೆ ಎಂದರು.
ಆದರೆ ಕಾರಣಾಂತರಗಳಿಂದ ಈ ತೀರ್ಮಾನದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿರುವುದು ಕಂಡುಬಂದಿದ್ದು ,ಹಾಗಾಗಿ ಯಾವುದೇ ಕಾರಣಕ್ಕೂ ಈ ದಿಟ್ಟ ಕ್ರಮದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.
ಅಪ್ರೆಂಟಿಸ್ ಮತ್ತು ಇಂಟರ್ಶಿಪ್ ತರಬೇತಿ ನೀಡಬೇಕು ಅನ್ನುತ್ತಿದ್ದಾರೆ ಆದರೆ ಕಂಪನಿಗಳೇ ನೀಡಬಹುದು ಎಂದು ತಿಳಿಸಿದರು.
ನಮ್ಮ ನೆಲ ನಮ್ಮ ಜಲ ಬಳಕೆ ಮಾಡಿಕೊಂಡು ಕೆಲಸ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತ ಪಡಿಸುತ್ತಿರುವುದು ಸರಿಯಲ್ಲ. ಕನ್ನಡಿಗರಿಗೆ ಸಿಗುವ ಸೌಲಭ್ಯವನ್ನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕಾರ್ಯರೂಪಕ್ಕೆ ತರಬೇಕು ಎಂದು ತಾಕೀತು ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್ ಕೃಷ್ಣ, ಶಿವಲಿಂಗಯ್ಯ ,ಎಂ ಸಿ ರಮೇಶ್, ಮಂಜು ಸೇರಿದಂತೆ ಇತರರಿದ್ದರು.