ಮಂಡ್ಯ:ಪ್ರತಿ ಟನ್ ಕಬ್ಬಿಗೆ ಎಫ್ ಆರ್ ಪಿ ಮತ್ತು ಎಸ್ ಎ ಪಿ ದರವನ್ನು ನೀಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ದ್ರೋಹ ಬಗೆದಿವೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ಎಲ್ ಭರತರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ಕೇಂದ್ರ ಸರ್ಕಾರ ಟನ್ ಕಬ್ಬಿಗೆ 5000 ರೂಪಾಯಿ ಬೆಲೆ ನಿಗದಿ ಮಾಡದೆ ಕಾರ್ಖಾನೆ ಮಾಲೀಕ ರೊಂದಿಗೆ ಶಾಮೀಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಸಕ್ಕರೆ ಕಂಪನಿ ಮಾಲೀಕರ ಮುಲಾಜಿನಲ್ಲಿ ನಡೆಯುತ್ತಿದೆ ಎಂದು ದೂರಿದರು .
ರೈತರ ಬಗ್ಗೆ ಕಾಳಜಿ ಇದ್ದರೆ ಮೋದಿ ಸರ್ಕಾರ ,ಕಬ್ಬಿಗೆ 5000 ರೂಪಾಯಿ ಎಫ್ ಆರ್ ಪಿ ದರ ನಿಗದಿಪಡಿಸಬೇಕಿತ್ತು .ಅದೇ ರೀತಿ ರಾಜ್ಯ ಸರ್ಕಾರ ಕನಿಷ್ಠ ಪ್ರತಿ ಟನ್ಗೆ 500 ರೂಪಾಯಿ ಎಸ್ ಎ ಪಿ ದರ ನಿಗದಿಪಡಿಸಬೇಕಿತ್ತು.ಆದರೆ ಈ ಎರಡೂ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಗುಡುಗಿದರು.
2024 _25ನೇ ಸಾಲಿನ ಕಬ್ಬಿನ ಎಫ್ ಆರ್ ಪಿ ಯನ್ನು ಶೇಕಡ 9.5ರಷ್ಟು ಇಳುವರಿಗೆ 3150 ಹಾಗೂ ಶೇಕಡ 10.25 ಇಳುವರಿಗೆ 3400 ರೂಪಾಯಿ ನಿಗದಿ ಮಾಡಿದ್ದಾರೆ .ಆದರೆ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಘೋಷಿಸುವ ಇಳುವರಿ ಸರಾಸರಿ ಶೇಕಡ 9. 5 ಇರುತ್ತದೆ .ಇಳುವರಿ ಘೋಷಣೆಯ ಸತ್ಯಾಂಶದಲ್ಲಿ ಅನುಮಾನವಿದೆ ..ಅದೇ ರೀತಿ ತೂಕದಲ್ಲಿಯೂ ಮೋಸ ನಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲು ಸೂಚನೆ ಇದ್ದರೂ ಜಿಲ್ಲಾಡಳಿತ ಇದಕ್ಕೆ ಮುಂದಾಗಿಲ್ಲ ಎಂದು ದೂರಿದರು.
ಕರ್ನಾಟಕ ರಾಜ್ಯ ಕೃಷಿ ಬೆಳೆ ಆಯೋಗ ಪ್ರತಿ ಟನ್ ಕಬ್ಬು ಬೆಳೆಯಲು 3580 ರೂಪಾಯಿ ವೆಚ್ಚವಾಗುತ್ತದೆ ಎಂದು ವರದಿ ನೀಡಿದೆ .ಸಕ್ಕರೆ ನಿರ್ದೇಶಕರ ಮಂಡಳಿ ಇದಕ್ಕೆ ಶೇಕಡ 10ರಷ್ಟು ಲಾಭಾಂಶ ಸೇರಿಸಿ ಪ್ರತಿಟನ್ನಿಗೆ 3938 ರೂಪಾಯಿ ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದೆ ಎಂದು ತಿಳಿಸಿದರಲ್ಲದೆ ಎಂಎಸ್ ಸ್ವಾಮಿನಾಥನ್ ಆಯೋಗದ ವರದಿಯಂತೆ ಒಂದು ಟನ್ ಕಬ್ಬಿಗೆ 5370 ನೀಡಬೇಕೆಂದು ಒತ್ತಾಯಿಸಿದರು .
ಗೋಷ್ಠಿಯಲ್ಲಿ ಸತೀಶ, ಲಿಂಗರಾಜ ಮೂರ್ತಿ ,ಮರಿಲಿಂಗೇಗೌಡ ಸೇರಿದಂತೆ ಇತರರಿದ್ದರು