ಮಂಡ್ಯ, ಜುಲೈ 27: ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಳೆದ ಹಲವಾರು ದಿನಗಳಿಂದ
ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಕೆಆರ್ ಎಸ್ ಜಲಾಶಯ 124.80ಅಡಿ
ಸಂಪೂರ್ಣ ಭರ್ತಿಯಾಗಿದ್ದು, ಕಾವೇರಿ ನದಿಗೆ 1.30ಲಕ್ಷ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಶ್ರೀರಂಗಪಟ್ಟಣದ
ಐತಿಹಾಸಿಕ ಲಾರ್ಡ್ ವೆಲ್ಲೆಸ್ಲಿ ಸೇತುವೆ ಮುಳುಗಡೆಯಾಗುವ ಅಪಾಯ ಉಂಟಾಗಿದೆ. ಹೊರಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ವೆಲ್ಲೆಸ್ಲಿ ಸೇತುವೆಗೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇದೆ.
ಕಾವೇರಿ ನದಿಗೆ 1.30ಲಕ್ಷ ಕ್ಯೂಸೆಕ್
ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ವೆಲ್ಲೆಸ್ಲಿ ಸೇತುವೆ ವೀಕ್ಷಣೆ ಮಾಡಲು ಶ್ರೀರಂಗಪಟ್ಟಣಕ್ಕೆ ಜನಸಾಗರವೇ ಹರಿದುಬರುತ್ತಿದೆ. ಸಾರ್ವಜನಿಕರು ಕಾವೇರಿ ನದಿ ಬಳಿ ಸೆಲ್ಪೀ ತೆಗೆದುಕೊಂಡು ಸಂಭ್ರಮಿಸುತ್ತಿರುವ ಸನ್ನಿವೇಶಗಳು ಸಾಮಾನ್ಯವಾಗಿದೆ. ಇನ್ನೂ ಕೆಲವರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ (ಮೈಸೂರು-ಬೆಂಗಳೂರು ಹಳೆ ಹೆದ್ದಾರಿ) ನಿಂತು ನೀರು ರಭಸವಾಗಿ ಹರಿಯುವ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೊತೆಗೆ ಹಲವರು ಸೆಲ್ಫಿ ಕೂಡ ತೆಗೆದುಕೊಳ್ಳುತ್ತಿದ್ದರು.
ಅಪಾರ ಪ್ರಮಾಣದ ನೀರು ನುಗ್ಗುತ್ತಿರುವ ಪರಿಣಾಮ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಕೆಲವು ಕೃಷಿ ಪ್ರದೇಶಗಳು ಜಲಾವೃತ್ತಗೊಂಡಿದ್ದು, ಬೆಳೆ ಹಾನಿ ಕೂಡ ಉಂಟಾಗಿದೆ. ಅದರಲ್ಲೂ ನದಿ ಅಂಚಿನಲ್ಲಿರುವ ಎಣ್ಣೆಹೊಳೆಕೊಪ್ಪಲು ಗ್ರಾಮದ ರೈತರು ಹಾಗೂ ಗ್ರಾಮಸ್ಥರಿಗೆ ಅಪಾಯದ ಪ್ರಮಾಣ ಹೆಚ್ಚಾಗುವ ಸಂಭವವಿದೆ. ಇದರ ಜತೆಗೆ ಶ್ರೀರಂಗಪಟ್ಟಣ ವೆಲ್ಲೆಸ್ಲಿ ಸೇತುವೆ ಬಳಿ ಆಶ್ರಮ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿ ವರ್ಗ ಸಾರ್ವಜನಿಕರು ಮುಳುಗಡೆ ಹಂತದಲ್ಲಿರುವ ಲಾರ್ಡ್ ವೆಲ್ಲೆಸ್ಲಿ ಸೇತುವೆ ಬಳಿ ಸಾರ್ವಜನಿಕರು ತೆರಳದಂತೆ ಬ್ಯಾರಿಕೇಡ್ ಹಾಗೂ ಗೇಟ್ ಗಳನ್ನು ಹಾಕಿ ನಿರ್ಬಂಧ ವಿಧಿಸಿದ್ದಾರೆ.
ಮಯೂರ ರಿವರ್ ವ್ಯೂ, ನಿಮಿಷಾಂಭ, ಸಂಗಮಕ್ಕೆ ಹರಿದ ಅಪಾರ ನೀರು : ಅಪಾರ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರ ಬಳಿ ಇರುವ ಮಯೂರ ರಿವರ್ ವ್ಯೂ ಹಂತದವರೆಗೆ ನೀರು ಬಂದು ನಿಂತಿದೆ. ಈ ದೃಶ್ಯ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಧಾವಿಸುತ್ತಿದ್ದಾರೆ.
ಜತೆಗೆ ಶ್ರೀರಂಗಪಟ್ಟಣದ ಶಕ್ತಿ ದೇವತೆ ನಿಮಿಷಾಂಭ ದೇವಸ್ಥಾನ ಹಾಗೂ ಸಂಗಮ, ಗೋಸಾಯಘಟ್ಟದಲ್ಲೂ ಯಥೇಚ್ಛವಾಗಿ ನೀರು ಹರಿಯುತ್ತಿದ್ದು, ಮೂರು ಕಡೆಗಳಲ್ಲಿಯೂ ನೀರು ಮೆಟ್ಟಿಲುವರೆಗೆ ಬಂದು ನಿಂತಿದೆ. ಹೀಗಾಗಿ ಯಾರೂ ಕೂಡ ಅನಾವಶ್ಯಕವಾಗಿ ನೀರಿಗಿಳಿಯದಂತೆ, ಮೀನು ಹಿಡಿಯಲು ಮುಂದಾಗದಂತೆ ಹಾಗೂ ಸೆಲ್ಪಿ ತೆಗೆಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇದಲ್ಲದೇ ಇಂದು ಕಂದಾಯ ಸಚಿವ ಕೃಷ್ಣ ಭೈರೈಗೌಡ ಅವರೂ ಕೂಡ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.