ಸರ್ವ ಪಕ್ಷಗಳ ಸಭೆಗೆ ಹೆಚ್.ಡಿ.ಕೆ ಬಹಿಷ್ಕಾರ : ಕಾಂಗ್ರೆಸ್ ಖಂಡನೆ
ಮಂಡ್ಯ, ಜುಲೈ ೧೫: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಸರ್ವ ಪಕ್ಷಗಳ ಸಭೆ ಬಹಿಷ್ಕರಿಸಿದ ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಡೆಯನ್ನು ಕಾಂಗ್ರೆಸ್ ಮುಖಂಡ ಶಿವನಂಜು ಖಂಡಿಸಿದರು.
ತಮಿಳುನಾಡಿಗೆ ಜುಲೈ 12 ರಿಂದ 20 ದಿನಗಳ ಕಾಲ ಪ್ರತಿದಿನ 1 ಟಿ.ಎಂ.ಸಿ. ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಮಾಡಿರುವ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಈ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಮಂಡ್ಯ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರು ಆದ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ರವರು ಬಹಿಷ್ಕಾರ ಹಾಕಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯು ಕಾಂಗ್ರೆಸ್ ಪಕ್ಷದ ಸಭೆಯಲ್ಲ. ಅಥವಾ ವೈಯಕ್ತಿಕ ಹಿತಾಸಕ್ತಿಗೋಸ್ಕರ ಕರೆದಿದ್ದ ಸಭೆಯು ಆಗಿರಲಿಲ್ಲ. ಬದಲಿಗೆ ರೈತರ ಹಾಗೂ ಸಾರ್ವಜನಿಕರ ಹಿತಾಸಕ್ತಿಗಾಗಿ ಕರೆದಿದ್ದ ಸಭೆ ಆಗಿತ್ತು. ನಮ್ಮ ಪಾಲಿನ ಕಾವೇರಿ ನೀರನ್ನು ಉಳಿಸುವ ಸಲುವಾಗಿ ಕರೆದಿದ್ದ ಸಭೆ. ಇಂತಹ ಮಹತ್ವದ ಸಭೆ ಬಹಿಷ್ಕರಿಸುವುದು ಯಾವ ನ್ಯಾಯ ಎಂದರು.
ಕಳೆದ ಬಾರಿ ನಮ್ಮ ರೈತರು ಒಂದು ಬೆಳೆಯನ್ನೂ ಸಹ ಬೆಳೆಯಲು ಸಾಧ್ಯವಾಗಿರುವುದಿಲ್ಲ. ಕುಡಿಯುವ ನೀರಿಗೂ ಸಂಕಷ್ಡ ಎದುರಿಸಿದ್ದರು. ಈ ಬಾರಿ ಕೂಡ ಈಗಷ್ಟೆ ಮಳೆಗಾಲ ಪ್ರಾರಂಭವಾಗುತ್ತಿದ್ದು, ಕೆ.ಆರ್. ಎಸ್. ಅಣೆಕಟ್ಟೆಯಲ್ಲಿ ಕೇವಲ 26 ಟಿ.ಎಂ.ಸಿ. ನೀರು ಇದ್ದು, ಡೆಡ್ ಸ್ಟೋರೇಜ್ ಕಳೆದರೆ ಕೇವಲ 16 ಟಿ.ಎಂ.ಸಿ. ನೀರು ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಸಂಕಷ್ಟ ತಪ್ಪಿದ್ದಲ್ಲ ಎಂದರು.
ಮಳೆಗಾಲ ಈಗಷ್ಟೇ ಪ್ರಾರಂಭವಾಗಿದ್ದರೂ ನಮ್ಮ ಅಣೆಕಟ್ಟಗಳಲ್ಲಿ ಸಾಕಷ್ಟು ನೀರು ಇಲ್ಲದಿದ್ದರೂ ಸಿ.ಡಬ್ಲೂ.ಎಂ.ಎ. ದಿನನಿತ್ಯ 1 ಟಿ.ಎಂ.ಸಿ. ನೀರು ಬಿಡುವಂತೆ ತರಾತುರಿಯಲ್ಲಿ ಮಾಡಿರುವ ಆದೇಶದ ಹಿನ್ನಲೆಯಲ್ಲಿ ಕರೆದಿದ್ದ ಸಭೆ ಆಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮುಂದಿನ ಕಾನೂನು ಹೋರಾಟ ರೂಪುರೇಷೆ, ಸಲಹೆ ಸಹಕಾರಗಳನ್ನು ಪಡೆಯಲು ಸರ್ವ ಪಕ್ಷಗಳ ಸಭೆ ಕರೆದಿದ್ದು, ಇಂತಹ ಮಹತ್ವದ ಸಭೆಗೆ ಮಂಡ್ಯ ಜಿಲ್ಲೆಯ ಸಂಸದರಾಗಿ ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳಾಗಿ ಸಭೆಗೆ ಭಾಗವಹಿಸಿ, ಸಲಹೆ ಸಹಕಾರಗಳನ್ನು ಕೊಡಬೇಕಾಗಿದ್ದು, ಅವರ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಇಂತಹ ಮಹತ್ವದ ವಿಚಾರಗಳಲ್ಲಿ ತಮಿಳುನಾಡು ಸಂಸದರಂತೆ ಒಗಟ್ಟು ಪ್ರದರ್ಶನ ಮಾಡುವುದನ್ನು ಬಿಟ್ಟು, ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಜನತೆ ಬಪ್ಪವುದಿಲ್ಲ. ಕಾವೇರಿಗಾಗಿ ಕುಮಾರಣ್ಣ, ದೇಶಕ್ಕಾಗಿ ಮೋದಿ ಎಂಬುದು ಘೋಷಣೆಗಾಗಿಯೇ ಉಳಿಯದಿರಲಿ ಎಂದರು.
ಕುಮಾರಣ್ಣರವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತರು ನೀರು ಬಿಡುವಂತೆ ಒತ್ತಾಯಿಸಿದಾಗ, ಕೀಲಿಕೈ ಕೇಂದ್ರ, ಸರ್ಕಾರದಲ್ಲಿದೆ ಎಂದು ಹೇಳಿದ್ದೀರಿ, ಈಗ ತಾವೇ ಕೇಂದ್ರದ ಮಂತ್ರಿಗಳಾಗಿದ್ದು ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
2023ರಲ್ಲಿ 670 ಟಿ.ಎಂ.ಸಿ. ನೀರು ಸಮುದ್ರದ ಪಾಲಾಗಿದ್ದು, ಮೇಕೆದಾಟು ಯೋಜನೆಯಿಂದ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ರಾಜ್ಯ ಸರ್ಕಾರದ ಹಾಗೂ ರಾಜ್ಯದ ಎಲ್ಲಾ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಕೆದಾಟು ಯೋಜನೆಗೆ ಅನುಮತಿಯನ್ನು ದೊರಕಿಸಿ ಕೊಡಲಿ. ಹಾಗೂ ಕರ್ನಾಟಕ ರಾಜ್ಯಕ್ಕೆ ನ್ಯಾಯುತವಾಗಿ ಬರಬೇಕಾದ ಜಿ.ಎಸ್.ಟಿ. ಹಣವನ್ನು ಬಿಡುಗಡೆ ಮಾಡಿಸಲಿ. ಅದನ್ನು ಬಿಟ್ಟು, ಸೇಡಿನ ರಾಜಕಾರಣ, ದ್ವೇಷದ ರಾಜಕಾರಣ ಅಥವಾ ಸರ್ವ ಪಕ್ಷಗಳ ಸಭೆಯನ್ನೇ ಬಹಿಷ್ಕರಿಸುವುದರಿಂದ ಈ ರಾಜ್ಯಕ್ಕೆ ಹಾಗೂ ಮಂಡ್ಯ ಜಿಲ್ಲೆಗೆ ಅನ್ಯಾಯವನ್ನು ಮಾಡಿದಂತೆಯೆ ಸರಿ. ಇನ್ನು ಮುಂದೆಯಾದರೂ ಮಂಡ್ಯ ಜಿಲ್ಲೆಯ ಹಿತದೃಷ್ಠಿಯಿಂದ ಹಾಗೂ ರಾಜ್ಯದ ಹಿತದೃಷ್ಠಿಯಿಂದ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಶಿವರುದ್ರ, ಸಂಪಹಳ್ಳಿ ದೇವರಾಜು, ಪ್ರಕಾಶ್ ಇತರರಿದ್ದರು.