ಕೆಆರ್ ಎಸ್ ಸಂಪೂರ್ಣ ಭರ್ತಿ
ಜುಲೈ 29ಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿನ ಸಲ್ಲಿಕೆ
ಎನ್.ಕೃಷ್ಣೇಗೌಡ ಪಾಂಡವಪುರ.
ಮಂಡ್ಯ, ಜುಲೈ 24: ಜಿಲ್ಲೆಯ ಜೀವನಾಡಿಯೂ ಆದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದಲೂ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಗರಿಷ್ಠ ಮಟ್ಟ 124.80ಅಡಿ ತಲುಪಿದೆ. ಹೀಗಾಗಿ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧತೆ ಹೆಚ್ಚಾಗಿದೆ. ಹೀಗಾಗಿ ನದಿ ಪಾತ್ರದ ಜನರಿಗೆ
ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕೃಷಿ ಚಟುವಟಿಕೆಗೆ ಅನುಕೂಲ : ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ. ಕಳೆದ ವಾರದಿಂದಿಚೆಗೆ ಸುರಿದ ವ್ಯಾಪಕ ಮಳೆಗೆ 100ಅಡಿ ದಾಟಿದ್ದ ಕೆಆರ್ ಎಸ್ ನಲ್ಲಿ ಇದೀಗ ಸಂಪೂರ್ಣ ಗರಿಷ್ಠ ಮಟ್ಟದ (124.80ಅಡಿ )ನೀರು ಸಂಗ್ರಹಗೊಂಡಿದೆ.
ಜುಲೈ 29ಕ್ಕೆ ಸಿಎಂ ಭಾಗಿನ ಸಲ್ಲಿಕೆ : ಕೃಷ್ಣರಾಜ ಸಾಗರ ಅಣೆಕಟ್ಟೆಯು ಗರಿಷ್ಟ ನೀರಿನ ಮಟ್ಟ 124.80ಅಡಿ ತಲುಪಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 29ರಂದು ಕೆಆರ್ ಎಸ್ ಅಣೆಕಟ್ಟೆಗೆ ಭಾಗಿನ ಸಲ್ಲಿಕೆ ಮಾಡಲಿದ್ದಾರೆ. ಈ ಮೊದಲು ಭಾಗಿನ ಸಲ್ಲಿಕೆ ಕಾರ್ಯಕ್ರಮ ಜುಲೈ 27ಕ್ಕೆ ನಿಗದಿಯಾಗಿತ್ತಾದರೂ ಇದೀಗ ಭಾಗಿನ ಸಲ್ಲಿಕೆ ಕಾರ್ಯಕ್ರಮವನ್ನು ಜುಲೈ 29ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ನೀರಿನ ವಿವರ : ಗರಿಷ್ಟ ಸಾಮರ್ಥ್ಯ : 124.80ಅಡಿ.
ಇಂದಿನ ನೀರಿನ ಮಟ್ಟ : 124.80 ಅಡಿ.
ಗರಿಷ್ಟ ಸಂಗ್ರಹ : 49.452 ಟಿಎಂಸಿ .
ಇಂದಿನ ಸಂಗ್ರಹ : 49.452 ಟಿಎಂಸಿ.
ಒಳ ಹರಿವು : 41099 ಕ್ಯೂಸೆಕ್ಸ್.
ಹೊರ ಹರಿವು : 41099 ಕ್ಯೂಸೆಕ್ಸ್.