ಮಂಡ್ಯ, ಜುಲೈ 16 : ಜಿಲ್ಲಾ ಉಸ್ತುವಾರಿ ಸಚಿವರೆನಿಸಿಕೊಂಡಿರುವ ಚಲುವರಾಯಸ್ವಾಮಿ ಬಹುಶಃ ತನ್ನನ್ನು ಮೇಲುಕೋಟೆ ಚಲುವರಾಯಣಸ್ವಾಮಿ ಅಂದುಕೊಂಡಿರಬೇಕು. ಬರೀ ಕೂಗಾಡುವುದರಲ್ಲಿ, ಮಾಧ್ಯಮಗಳ ಮೇಲೆ ಮುಖಂಡರುಗಳ ಮೇಲೆ ಎಗರಾಡುವುದನ್ನ ಬಿಟ್ಟರೆ ಜಿಲ್ಲಾ ಉಸ್ತುವಾರಿ ಇವರಿಗೆ ತಿಳಿದೇ ಇಲ್ಲ ಎನ್ನಿಸುತ್ತದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಪ್ರುತ್ಯುತ್ತರ ನೀಡಿದರು.
ಜಿಲ್ಲೆಯ ಸಮಸ್ಯೆ, ಕಾವೇರಿ ಸಮಸ್ಯೆ ಬಂದಾಗ ಧ್ವನಿ ಎತ್ತುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಈಗಾಗಲೇ ಕೆ.ಆರ್.ಎಸ್ ಡ್ಯಾಂನಲ್ಲಿ ನೀರು ಇದ್ದರೂ ರೈತರಿಗೆ ನೀರು ಕೊಡದೆ ರಾಜಕಾರಣ ಮಾಡಿದ್ದೀರಿ. ಈಗ ಮಳೆ ಆರಂಭವಾಗಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಎಚ್ಚರಿಕೆ ಇರಲಿ. ರೈತರ ಬದುಕಿನ ಬಗ್ಗೆ ಗಮನವಿರಲಿ ಎಂದರೆ ಬಾಯಿಗೆ ಬಂದಂತೆ ಹರಟುತ್ತೀರಿ. ಜಿಲ್ಲೆಗೆ ನೀವು ಮಾಡಿರುವ ಅನ್ಯಾಯದಲ್ಲಿ ಜನ ನಿಮ್ಮನ್ನು ಓಡಾಡಲು ಬಿಟ್ಟಿರುವುದೇ ಹೆಚ್ಚು ಎಂದು ಲೇವಡಿ ಮಾಡಿದರು.
ಏನಂದ್ರೀ ಮಂತ್ರಿಗಳೇ “ಅವನ್ಯಾರೀ ಪುಟ್ಟರಾಜು” ಸ್ವಲ್ಪ ಹಿಂದಿರುಗಿ ನೋಡಪ್ಪಾ ನೀವು ಜಿಲ್ಲಾ ಪಂಚಾಯಿತಿ ಸದಸ್ಯ ಆಗುವಾಗಲಿಂದಲೂ ನಿಮ್ಮನ್ನ ಉಪಾಧ್ಯಕ್ಷನ್ನಾಗಿ ಮಾಡುವಾಗಲೂ ಇದ್ದವನು. ನಿನ್ನ ತರಹ ನಾನು 3 ಸಲ ಎಂ.ಎಲ್.ಎ, ಎಂ.ಪಿ, ಜಿಲ್ಲಾ ಉಸ್ತುವಾರಿ ಎಲ್ಲಾ ನೋಡಿದ್ದೀನಿ, ಇನ್ನೊಬ್ಬರ ಬಗ್ಗೆ ಯಾಚಕ ಮಾಡದೇ ಬದುಕು ಕಟ್ಟಿದ್ದೇನೆ. ಹೌದು ನಾನು ಬಿಸಿನೆಸ್ ಮ್ಯಾನ್. ಕಷ್ಟಪಟ್ಟು ದುಡಿದು ಜನಸೇವೆ ಮಾಡುತ್ತಿದ್ದೇನೆ. ಯಾಚಕ ನನಗೆ ಬರಲ್ಲಾ, ‘ರಾಜಕಾರಣ ಮಾಡಲು ರಾಜಕಾರಣಿ ನೀನು’. ಜನ ಸೇವೆ ಮಾಡಲು ರಾಜಕಾರಣಿ ನಾನು. ಹೌದ್ರಿ ಮನಸ್ಸಿಗೆ ಬೇಸರ ಆದಾಗ ಕೆಲವರೊಂದಿಗೆ ಹಂಚಿಕೊಂಡಿದ್ದೇನೆ ಅದು ಸಹಜ.
ನಿಮ್ಮ ರೀತಿ ನಂಬಿಸಿ ಕತ್ತು ಕುಯ್ಯುವವನಲ್ಲ ಈ ಪುಟ್ಟರಾಜು ಎಂದು ಗುಡುಗಿದರು.
ಮಿತ್ರದ್ರೋಹ, ಮೈತ್ರಿ ಧರ್ಮದ್ರೋಹ ನನಗೆ ಗೊತ್ತಿಲ್ಲ. ಗಣಿಗ ರವಿಗೆ ಉತ್ತರಕೊಡು ಸಾಕು ಅಂತೀರಲ್ಲ. ಅವರೇನು ಎಂ.ಎಲ್.ಎ ಅಲ್ವಾ? ಅವರಿಗೆ ಗೌರವ ಇಲ್ವ. ನಿನ್ನತರ ಅವರೂ ಎಂ.ಎಲ್.ಎ ನೀನು ಮಂತ್ರಿ ಅಷ್ಟೆ. ದುರಹಂಕರ ಒಳ್ಳೆದಲ್ಲ ಮಂತ್ರಿಗಳೇ ಎಂದರು.
ಎಗರಾಡುವುದನ್ನ ಬಿಟ್ಟು ಜಿಲ್ಲೆಯ ಜನರ ಸೇವೆ ಮಾಡಿ. ಕೇಂದ್ರದ ಮಂತ್ರಿಗಳ ಜನಸಂಪರ್ಕ ಸಭೆಗೆ ಅಧಿಕಾರಿಗಳು ಹೋಗುವುದು ಬೇಡ ಎಂದು ಠರಾವು ಹೊರಡುಸುತ್ತೀರಿ. ಕಾವೇರಿ ಸಮಸ್ಯೆ ಬಂದಾಗ “ಕುಮಾರಣ್ಣ ಬಾ” ಅಂತ ಮನವಿ ಮಾಡುತ್ತೀರಿ. ಅದನ್ನೇ ರೀ ನಾನು ಹೇಳಿದ್ದು, ಒಕ್ಕೂಟದ ವ್ಯವಸ್ಥೆಯಲ್ಲಿ ಕೆಲಸ ಮಾಡುವುದನ್ನ ಕಲಿಯಿರಿ. ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡಿದರೆ ಆಗುವುದಿಲ್ಲ. ಸಂವಿಧಾನ ಓದ್ರೀ ಸಾಕು. ಒಕ್ಕೂಟದ ವ್ಯವಸ್ಥೆ ಅಂದರೆ ಏನು ಅಂತ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಕುಮಾರಸ್ವಾಮಿರವರು ಮಂತ್ರಿಯಾಗಿ ಕೇವಲ 1 ತಿಂಗಳು ಆಗಿದೆ. ತಡಕಳಪ್ಪ ಚಲುವಣ್ಣ. ನಿನ್ನ ಕೆಲಸ ನೀನು ಮಾಡು. ಅವರಿಗೆ ಗೊತ್ತಿದೆ ಜಿಲ್ಲೆಯ ಸಮಸ್ಯೆ ಏನು ಎಂಬುದು. ಜತೆಗೆ ರೈತರ ಸಮಸ್ಯೆ ಏನು ಅಂತನೂ ಗೊತ್ತಿದೆ. ಅವರ ಕೆಲಸ ಅವರು ಮಾಡುತ್ತಾರೆ. ‘ತಾಕತ್ತು ಇದ್ದರೆ ಬಾ’ ಅವರೇನು ದೇವರೇ ‘ಗಂಡಸೇ ಇಲ್ವಾ’ ಅಂದೋರಿಗೆಲ್ಲಾ ಜಿಲ್ಲೆಯ ಪ್ರಜ್ಞಾವಂತ ಜನರೇ ಬುದ್ಧಿ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಋಣ ತೀರಿಸುವುದು ಗೊತ್ತಿದೆ. ಇನ್ನಾದರೂ ಸ್ವಲ್ಪ ಜಿಲ್ಲೆಯ ಸಮಸ್ಯೆಗಳ ಮಧ್ಯೆ ನಿಂತು ಮಾತಾಡಿ. ಬೇರೆ ನಾಯಕರುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಗೌರವವಿರಲಿ. ನನಗೂ ಏಕವಚನ, ಬಹುವಚನ ನಿಮಗಿಂತ ಚೆನ್ನಾಗಿ ಬರುತ್ತೆ ಎಂದು ತಿರುಗೇಟು ನೀಡಿದರು.