ಮಂಡ್ಯ :ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಅಕ್ರಮ ಮೀಟರ್ ಬಡ್ಡಿ ದಂಧೆ ರಾಜ್ಯದ ದುಡಿಯುವ ಶ್ರಮಿಕ ವರ್ಗವನ್ನು ಸಾಲದ ಸುಳಿಯ ಮೃತ್ಯು ಕೂಪಕ್ಕೆ ಸಿಲುಕಿಸಿದೆ ಎಂದು ಸೌಜನ್ಯ ಹೋರಾಟ ಸಮಿತಿಯ ಸದಸ್ಯ ಗಿರೀಶ್ ಮಟ್ಟಣ್ಣನವರ್ ಆರೋಪಿಸಿದ್ದಾರೆ .
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ .ಆ ಮೂಲಕ ನಮ್ಮ ರಾಜ್ಯದ ದುಡಿಯುವ ಶ್ರಮಿಕ ವರ್ಗ ಮತ್ತು ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸಿ ಮೃತ್ಯು ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು .
ರಾಜ್ಯದಲ್ಲಿ ಎಸ್ ಕೆ ಡಿ ಆರ್ ಡಿ ಪಿ ನಡೆಸುತ್ತಿದೆ ಎಂದು ಹೇಳಲಾಗುವ ಎಸ್ ಹೆಚ್ ಜಿ ಸ್ವಸಹಾಯ ಸಂಘದ ಸದಸ್ಯರಿಗೆ ಇದುವರೆಗೂ ತಮ್ಮ ಸಂಘದ ನೋಂದಣಿ ಪ್ರತಿಯನ್ನು ನೀಡಿಲ್ಲ. ಸಂಘದ ನೀತಿ ನಿಯಮಗಳನ್ನು ಸದಸ್ಯರಿಗೆ ತಿಳಿಸಿಲ್ಲ ಎಂದು ದೂರಿದರು .
ಎಸ್ ಕೆ ಡಿ ಆರ್ ಡಿ ಪಿ ಕಮಿಷನ್ ಏಜೆಂಟಿನಂತೆ ಕೆಲಸ ಮಾಡುತ್ತಿದೆ. ಇದುವರೆಗೂ ಬ್ಯಾಂಕಿನ ಜೊತೆಗೆ ಆ ಸಂಸ್ಥೆಯ ಮುಖ್ಯಸ್ಥರು ಮತ್ತು ಬ್ಯಾಂಕ್ ನಡುವೆ ಆಗಿರುವ ಒಪ್ಪಂದದ ಪ್ರತಿಯನ್ನು ಸದಸ್ಯರಿಗೆ ನೀಡಿಲ್ಲ .ಈ ಬಗ್ಗೆ ಸದಸ್ಯರ ಗಮನಕ್ಕೂ ತಂದಿಲ್ಲ .ಇದು ಆ ಸಂಸ್ಥೆಯ ಪಾರದರ್ಶಕತೆಯನ್ನು ತೋರಿಸುತ್ತಿದೆ ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 52 ಲಕ್ಷ ಸದಸ್ಯರಿದ್ದಾರೆ .ಅವರಿಗೆ ಸಾಲದ ಬಡ್ಡಿ ,ಸಾಲದ ಕಂತಿನ ದರ ,ಕಂತಿನ ಅವಧಿಯನ್ನು ಬ್ಯಾಂಕ್ ನಿರ್ಧರಿಸಬೇಕು .ಆದರೆ ಬ್ಯಾಂಕಿನ ದಲ್ಲಾಳಿ ಏಜೆಂಟ್ ಆಗಿರುವ ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆ ಎಲ್ಲವನ್ನು ನಿಭಾಯಿಸುತ್ತಿದ್ದು ಇದರಿಂದ ಸದಸ್ಯರಿಗೆ ವಂಚನೆ ಆಗುತ್ತಿದೆ ಎಂದು ತಿಳಿಸಿದರು.
ಸದಸ್ಯರ ಉಳಿತಾಯ ಹಣವನ್ನು ಸ್ವಸಹಾಯ ಗುಂಪಿನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಎಸ್ ಕೆ ಡಿ ಆರ್ ಡಿ ಪಿ ಸಂಸ್ಥೆ ತನ್ನ ಮನಸ್ಸಿಗೆ ಬಂದ ಖಾತೆಗೆ ಜಮಾ ಮಾಡುತ್ತಿದೆ. ಉಳಿತಾಯದ ಹಣದ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿಲ್ಲ ಎಂದು ತಿಳಿಸಿದರು.
ಕಡ್ಡಾಯವಾಗಿ ಗುಂಪು ವಿಮೆ ಮಾಡಿಸಲಾಗಿದ್ದು ಇದಕ್ಕೂ ಬ್ಯಾಂಕಿಗೂ ಯಾವ ಸಂಬಂಧವಿದೆ ಎಂದು ಪ್ರಶ್ನಿಸಿದ ಅವರು ಸ್ವಸಹಾಯ ಸಂಘದ ಸದಸ್ಯರ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಗುಂಪು ವಿಮೆ ಮಾಡಿಸಿರುವುದರ ಹಿಂದೆ ಹುನ್ನಾರವಿದೆ ಎಂದು ದೂರಿದರು.
ಪ್ರತಿ ವಾರ ಸಂಘದ 52 ಲಕ್ಷ ಸದಸ್ಯರಿಂದ ಸರಾಸರಿ 2000 ವಸೂಲಿ ಮಾಡಲಾಗುತ್ತಿದೆ .ಇದರ ಅಂದಾಜು 10000 ಕೋಟಿ ರೂಪಾಯಿಗಿಂತ ಅಧಿಕವಾಗಿದೆ. ಇದರ ಬಡ್ಡಿಯನ್ನು ಯಾರು ತಿನ್ನುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ .ಇದು ದೇಶದ ಅತಿ ದೊಡ್ಡ ಆರ್ಥಿಕ ಹಗರಣವಾಗಿದೆ ಎಂದರು .
ಸರ್ಕಾರದ ಕೆರೆ ಯೋಜನೆ, ಮದ್ಯ ವರ್ಜನ ಯೋಜನೆ ,ಕೌಶಲ್ಯ ಅಭಿವೃದ್ಧಿ ಯೋಜನೆಗಳ ಗುತ್ತಿಗೆ ಪಡೆದು ಸರ್ಕಾರದ ಅನುದಾನದಿಂದ ಕೆಲಸ ಮಾಡಿಸಿ ಪೂಜ್ಯರು ದಾನ ಕೊಟ್ಟರು. ಇದರಿಂದ ಗ್ರಾಮ ಅಭಿವೃದ್ಧಿ ಆಗಿದೆ ಎಂದು ಹೇಳಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದು ಇದರಿಂದ ಸರ್ಕಾರಕ್ಕೂ ವಂಚನೆ ಮಾಡಲಾಗುತ್ತಿದೆ ಎಂದು ಆಪಾದಿಸಿದರು .
ಮಳವಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಮಹಿಳೆಯೊಬ್ಬರಿಗೆ ಸಾಲದ ವಿಚಾರವಾಗಿ ಕಿರುಕುಳ ನೀಡಿದ್ದು ಆಕೆ ಈ ಸಂಸ್ಥೆ ಮಾಡಿರುವ ಅವಮಾನವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಧರ್ಮಾಧಿಕಾರಿಗಳು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು .ಈ ಸಂಸ್ಥೆಯ ಬಗ್ಗೆ ಸಾರ್ವಜನಿಕರು ಜಾಗೃತ ರಾಗಬೇಕು ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮಹೇಶ್ ಶೆಟ್ಟಿ ,ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಅಂಬೇಡ್ಕರ್ ಸೇನೆಯ ಬಂಡೂರು ಸಿದ್ದರಾಜು, ಆತ್ಮಹತ್ಯೆಗೆ ಶರಣಾದ ಮಹಿಳೆಯ ಪತಿ ಮಲ್ಲು, ನೀತಿ ಸಮಿತಿ ರಾಜ್ಯಾಧ್ಯಕ್ಷ ಜಯಶೆಟ್ಟಿ, ರವಿ ಶೆಟ್ಟಿ, ಅನಿಲ್ ,ಡಿ ಎಸ್ ಎಸ್ ಸಂಚಾಲಕ ಸುರೇಶ್ ಉಪಸ್ಥಿತರಿದ್ದರು.