ಪಶ್ಚಿಮ ಘಟ್ಟ ಉಳಿಯಲು ಗಾಡ್ಗಿಲ್ ವರದಿ ಜಾರಿಯಾಗಲಿ. ಎನ್ಇ ಸಿ ಎಫ್ ಹಾಗೂ ರೈತ ಸಂಘಟನೆಗಳ ಆಗ್ರಹ.
ಪ್ರಸ್ತುತ ಪಶ್ಚಿಮ ಘಟ್ಟ ಸೆರಗಿನಲ್ಲಿ ಜರುಗುತ್ತಿರುವ ಸಾಲು ಸಾಲು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಘಟ್ಟ ಉಳಿಯಬೇಕಾದರೆ, ಶಿರೂರು ವಯನಾಡಿನಂತಹ ದುರಂತಗಳು ಮುಂದೆ ನಡೆಯಬಾರದು ಎಂದಾದರೆ ಮಾಧವ ಗಾಡ್ಗೀಳ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಪರಿಸರ ಬಳಗದ ಸಂಘಟನೆಗಳು ಒತ್ತಾಯಿಸಿದವು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಪರಿಸರ ರಮೇಶ್,ಅವೈಜ್ಞಾನಿಕವಾಗಿ ರಸ್ತೆ ಅಗಲೀಕರಣ, ಪ್ರವಾಸೋದ್ಯಮದ ಹೆಸರಿನಲ್ಲಿ ರೋಪ್‌ವೇ, ಸುರಂಗ ಮಾರ್ಗ ಗಳನ್ನು ಮಾಡುತ್ತ ಹೋದರೆ ಮುಂದೊಂದು ದಿನ ಪಶ್ಚಿಮ ಘಟ್ಟ ನೂರಾರು ದುರಂತ ಕಥೆಗಳಿಗೆ ಸಾಕ್ಷಿಯಾಗಲಿದೆ. ಆದ್ದರಿಂದ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಹಾಗೂ ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿಯನ್ನು ಕೂಡಲೇ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ತೀರ್ಥಹಳ್ಳಿ- ಆಗುಂಬೆ ಪಶ್ಚಿಮ ಘಟ್ಟ ಮಾರ್ಗದಲ್ಲಿ ಸುರಂಗ ಮಾರ್ಗ, ಹುಬ್ಬಳ್ಳಿ ಅಂಕೋಲ ರೈಲುಮಾರ್ಗಕ್ಕಾಗಿ 2 ಲಕ್ಷ ಮರ ಗಳನ್ನು ಕಡಿಯಲು ಸಮೀಕ್ಷೆ, ಶರಾವತಿ ಭೂಗರ್ಭ ಯೋಜನೆಗಾಗಿ ಮತ್ತೆ ಸಾಗರದಿಂದ ಶಿರಸಿವರೆಗೆ ರೈಲು ಮಾರ್ಗ, ಧರ್ಮಸ್ಥಳ ಹಾಗೂ ಕೊಲ್ಲೂರಿನಲ್ಲಿ ಏರ್ಪೋರ್ಟ್ ನಿಲ್ದಾಣ ಶಿವಮೊಗ್ಗದಿಂದ ಸಾಗರದವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. ಇವೆಲ್ಲವೂ ಪರಿಸರ ಸೂಕ್ಷ್ಮ ಪ್ರದೇಶಗಳಾಗಿದ್ದು ಜೀವಸಂಕುಲಕ್ಕೆ ಮಾರಕವಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪು ಗೌಡ ಮಾತನಾಡಿ ಆಡಳಿತಕ್ಕೆ ಬರುವ ಪ್ರತಿ ಸರ್ಕಾರಗಳು ವೈಜ್ಞಾನಿಕವಾದ ಸಮಿತಿಗಳನ್ನು ರಚನೆ ಮಾಡಿ ಪರಿಸರ ಕುರಿತ ಸಾಧಕ ಬಾದಕಗಳ ಬಗ್ಗೆ ಚರ್ಚಿಸಿ ಯೋಜನೆಗಳನ್ನು ರೂಪಿಸುವುದರ ಬದಲು ಅವೈಜ್ಞಾನಿಕ ಕಾಮಗಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ರೈಲು ಸುರಂಗ ಮಾರ್ಗಗಳು ಚತುಸ್ಪತ ರಸ್ತೆಗಳು, ಹೋಂ ಸ್ಟೇ ರೆಸಾರ್ಟ್ಸ ಗಳು ಅಕ್ರಮ ಅರಣ್ಯ ಒತ್ತುವರಿ ಮುಂತಾದ ಅರಣ್ಯೇತರ ಚಟುವಟಿಕೆಗಳು ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಟ್ರಕಿಂಗ್ ರದ್ದುಪಡಿಸದಿದ್ದರೆ ಮುಂದೊಂದು ದಿನ ಇಡೀ ಪಶ್ಚಿಮಘಟ್ಟವೇ ದುರಂತಕ್ಕೆ ಸಾಕ್ಷಿಯಾಗಲಿದೆ.ಗುಡ್ಡ ಕುಸಿತವಾಗುತಿರುವುದು ಹೆಚ್ಚು ಮಳೆಯಿಂದಲ್ಲ ಅವೈಜ್ಞಾನಿಕ ಅಭಿವೃದ್ದಿ ಯೋಜನೆಗಳಿಂದ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಡ್ಯ ಜಿಲ್ಲಾ ಘಟಕದ ಪರಿಸರ ರಮೇಶ್,ಮಂಗಲ ಯೋಗೇಶ್. ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆಂಪು ಗೌಡ, ರೈತ ಸಂಘದ ಹೋರಾಟಗಾರರಾದ ಮಂಜುನಾಥ್ ಎಣ್ಣೆ ಹೊಳೆ ಕೊಪ್ಪಲು ರಘು, ಹರವು ಪ್ರಕಾಶ್, ವಿಜಯ್ ಕುಮಾರ್, ಹರವು ಗೋವಿಂದರಾಜ್, ಗಾಂಧಾಳು ಜಯರಾಮ್ ಕರುನಾಡ ಸೇವಕರು ಸಂಘಟನೆಯ ನಗರ ಘಟಕದ ಚಂದ್ರು ಮಲ್ಲಿಗೆರೆ ಅಣ್ಣಯ್ಯ, ಕುಂಬೇರಹಳ್ಳಿ ಆನಂದ್ ಇತರೆ ಪರಿಸರ ಆಸಕ್ತ ಪ್ರಮುಖರು ಉಪಸ್ಥಿತರಿದ್ದು ಮಾಧವ ಗಾಡ್ಗಿಲ್ ವರದಿಯನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.