ಮಂಡ್ಯ : ಪೆನ್‌ಡ್ರೈವ್ ಪ್ರಕರಣದಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಯಾವುದೇ ತೊಂದರೆಯಿಲ್ಲ. ಬದಲಿಗೆ ವರದಾನವಾಗಲಿದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸಿ.ಎಸ್.ಪುಟ್ಟರಾಜು ಪೆನ್‌ಡ್ರೈವ್ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಇಲ್ಲ. ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಈಗಾಗಲೇ ಹೊರಹಾಕಲಾಗಿದೆ. ಎಸ್‌ಐಟಿಗೆ ಪ್ರಕರಣ ವಹಿಸಲಾಗಿದ್ದು, ತನಿಖೆಗೆ ಹಾಜರಾಗುವುದಾಗಿ ಸ್ವತಃ ಪ್ರಜ್ವಲ್ ಹೇಳಿದ್ದಾರೆ. ಪೆನ್‌ಡ್ರೈವ್ ಹಂಚಿದ ಹೀನಕೃತ್ಯ ಯಾರು ಮಾಡಿದ್ದು ಗೊತ್ತಿದೆ. ಅದೇ ನಮಗೆ ವರದಾನ ಆಗಲಿದೆ. ಹೀಗಾಗಿ ಪೆನ್‌ಡ್ರೈವ್ ಪ್ರಕರಣದಿಂದ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಯಾವುದೇ ತೊಂದರೆ ಆಗಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಮುಖಂಡರು ತೀರ್ಮಾನ ಮಾಡಿ ಕೆ.ವಿವೇಕಾನಂದ ಅವರನ್ನು ಕಣಕ್ಕಿಳಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಂದಾಗಿ ವಿವೇಕಾನಂದರವರನ್ನು ಗೆಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ಶಿಕ್ಷಕರು ವಿವೇಕಾನಂದರವರಿಗೆ ಅತಿ ಹೆಚ್ಚಿನ ಮತಗಳನ್ನು ನೀಡುವ ಮೂಲಕ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳಿಸಬೇಕೆಂದು ಮನವಿ ಮಾಡಿದರು.