ಮಂಡ್ಯ: ನೀರಿಲ್ಲದೆ ಮಳವಳ್ಳಿಯ ರೈತರು ಬೆಳೆ ನಷ್ಟ ಅನುಭವಿಸಿದ್ದು ಆದ ಕಾರಣ ಪ್ರತಿ ಎಕರೆಗೆ 30,000 ರೂಪಾಯಿ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಅನ್ನದಾನಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳವಳ್ಳಿಯ ಬಹುತೇಕ ಪ್ರದೇಶಗಳಲ್ಲಿ ನೀರಿಗೆ ತೊಂದರೆ ಆಗಿದೆ .ಕೆಲವೆಡೆ ಮಳೆ ಆಶ್ರಯಿಸಿ ಬಿತ್ತನೆ ಮಾಡಲಾಗಿದೆ .ಆದರೆ ಈ ಭಾಗಕ್ಕೆ ನೀರು ಹರಿಸದ ಕಾರಣ ಬೆಳೆಗಳು ಒಣಗಿದ್ದು ಆದ ಕಾರಣ ಪ್ರತಿ ಎಕರೆಗೆ 30,000 ,ಖುಷ್ಕಿ ಜಮೀನಿಗೆ 25000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು .
ಮಳವಳ್ಳಿ ತಾಲೂಕಿನ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೂ ಸರ್ಕಾರ ಕಿಂಚಿತ್ತು ಗಮನಹರಿಸಿಲ್ಲ. ರೈತರು ನೀರಿಗೆ ಕಣ್ಣೀರು ಹಾಕಿ ಈಗ ಕಣ್ಣಿನಿಂದ ರಕ್ತ ಸುರಿಸುವ ಪರಿಸ್ಥಿತಿ ಎದುರಾಗಿದೆ ಎಂದರು. ಜಲಪಾತೋತ್ಸವ ಸಂದರ್ಭದಲ್ಲಿ ನೀರಿಗಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ನಮ್ಮನ್ನು 5 ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು ಎಂದು ದೂರಿದರು .
ಮಳವಳ್ಳಿ ವ್ಯಾಪ್ತಿಯ ಮಳೆ ಆಶ್ರಯ ಪ್ರದೇಶದಲ್ಲಿ ರಾಗಿ ಮತ್ತು ಜೋಳ ಪ್ರಮುಖ ಬೆಳೆಯಾಗಿದೆ. ಮಳೆ ನಂಬಿ ರೈತರು ಬೆಳೆ ಹಾಕಿದ್ದಾರೆ .ಆದರೆ ನೀರಿಲ್ಲದೆ ಬೆಳೆಗಳು ಒಣಗಿದೆ ಎಂದರು. ಹೆಬ್ವಕವಾಡಿ ,ವಿಶ್ವೇಶ್ವರಯ್ಯ, ರಾಮಸ್ವಾಮಿ ,ಮಾಧವ ಮಂತ್ರಿ ನಾಲೆ ಸೇರಿದಂತೆ ಐದು ನಾಲೆಗಳು ರೈತರ ಜೀವನಕ್ಕೆ ಆಶ್ರಯ ನೀಡಿದೆ. ಆದರೆ ಒಂದು ನಾಲೆಯನ್ನು ಹೊರತುಪಡಿಸಿ ಬೇರೆ ಎಲ್ಲೂ ನೀರು ಬಿಟ್ಟಿಲ್ಲ ಎಂದು ದೂರಿದರು. ಆಗಸ್ಟ್ ತಿಂಗಳಿನಲ್ಲಿ ಬಿತ್ತನೆಗೆ ನೀರು ಕೊಡಬೇಕಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ನೀರು ಬಿಟ್ಟರು ಸಹ ಬೆಳೆ ನಾಶವಾಗುತ್ತದೆ .ಬೆಳೆಗೆ ರೋಗ ತಗಲುತ್ತದೆ ಎಂದರು. ಮೆಟ್ಟೂರಿಗೆ ನೀರು ಹೋಗುವ ಮೊದಲು ಮಳವಳ್ಳಿಯ ಕೊನೆಯ ಭಾಗಕ್ಕೆ ನೀರು ಹರಿಸಬೇಕಿತ್ತು .ಆಗ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು .
ಹಲಗೂರು ಹೋಬಳಿ ಸಂಪೂರ್ಣವಾಗಿ ನೀರಾವರಿಯಿಂದ ವಂಚಿತವಾಗಿದೆ. ಇಲ್ಲಿ ರೇಷ್ಮೆ ಬೆಳೆಯೇ ಪ್ರಮುಖವಾಗಿದೆ .ಭೀಮಕೆರೆ, ಬ್ಯಾಡರಹಳ್ಳಿ ಕೆರೆ ತುಂಬಿಸಿದ್ದರೆ ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿತ್ತು. ಆದರೆ ಇದನ್ನು ಮಾಡಿಲ್ಲ ಎಂದರು. ಗಂಗಾ ಆರತಿಯಂತೆ ಕಾವೇರಿ ಆರತಿ ಮಾಡಲು ಉಸ್ತುವಾರಿ ಸಚಿವರು ಹೊರಟಿದ್ದಾರೆ .ಅವರು ಸಚಿವರಾದ ನಂತರ ಇದುವರೆಗೂ ಮಳವಳ್ಳಿ ತಾಲೂಕಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .
ನೀರಿಲ್ಲ ಎಂದು ಮನವಿ ಮಾಡಿದರೂ ನಿಮ್ಮ ಕಿವಿ ಕೇಳಿಸುತ್ತಿಲ್ಲವೇ ಸಚಿವರೆ ಎಂದು ಪ್ರಶ್ನಿಸಿದ ಅವರು ,ನಿಮ್ಮ ಶಾಸಕರಿಗಾದರೂ ಈ ಬಗ್ಗೆ ತಿಳಿಹೇಳಿ ಎಂದರು .
ಈಗಾಗಲೇ ಜಲಪಾತೋತ್ಸವ ಮುಗಿದಿದೆ .ಈಗ ಕಾವೇರಿ ಆರತಿ ಆರತಿ ಮಾಡುತ್ತಿದ್ದಾರೆ. ರೈತರು ಇದನ್ನು ಕೇಳುತ್ತಿಲ್ಲ .ಆದರೆ ಅವರಿಗೆ ನೀರು ನೀಡಿ ಅವರ ಜೀವನವನ್ನು ಹಸನು ಮಾಡಿ ಎಂದರು .
ರೈತರು ,ಪ್ರಾಣಿ ,ಪಕ್ಷಿಗಳಿಗೆ ಎಲ್ಲಿ ನೀರು ಸಿಗುತ್ತದೆ ಅದೇ ಜಲಪಾತೋತ್ಸವ ಮಾಡಿದಂತೆ ಆಗುತ್ತದೆ .ಆದರೆ ಎರಡು ಟಿಎಂಸಿ ನೀರು ಪೋಲು ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು .
. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಜಯರಾಮು ,ಪುರಸಭೆ ಮಾಜಿ ಅಧ್ಯಕ್ಷ ನಂದಕುಮಾರ್ ,ಜೆಡಿಎಸ್ ಯುವ ಘಟಕದ ಅಧ್ಯಕ್ಷ ರವಿ, ಅಲ್ಪಸಂಖ್ಯಾತ ಘಟಕದ ಮೆಹಬೂಬ್ ಪಾಷಾ, ಹನುಮಂತು ಸೇರಿದಂತೆ ಇತರರಿದ್ದರು.