ಕೆಆರ್ ಎಸ್ ಭರ್ತಿಗೆ ಕ್ಷಣಗಣನೆ
*121 ಅಡಿ ದಾಟಿದ ಕನ್ನಂಬಾಡಿ ಅಣೆಕಟ್ಟೆ
ಕೆಆರ್ ಎಸ್ ಭರ್ತಿಗೆ ಮೂರೇ ಅಡಿ ಬಾಕಿ
*ಎನ್.ಕೃಷ್ಣೇಗೌಡ ಪಾಂಡವಪುರ
ಮಂಡ್ಯ, ಜುಲೈ ೨೦: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಕೆಆರ್ ಎಸ್ ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ಒಳಹರಿವು ಬರುತ್ತಿದ್ದು ಅಣೆಕಟ್ಟೆ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.
ಹೌದು, ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ ಅಣೆಕಟ್ಟೆಯ ನೀರಿನ ಮಟ್ಟ 121 ಅಡಿಯನ್ನು ದಾಟಿದೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ಅನ್ನದಾತರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ವರ್ಷ ತೀವ್ರ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರು, ಮಳೆ ಬೆಳೆ ಇಲ್ಲದೇ ಆಕಾಶದತ್ತ ದೃಷ್ಠಿ ನೆಟ್ಟು ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಇದರೊಂದಿಗೆ ಸಂಕಷ್ಟ ಸೂತ್ರದ ಅನ್ವಯ ತಮಿಳುನಾಡಿಗೆ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಬಿಡಿ ಎನ್ನುವ ಕಾವೇರಿ ನೀರು ನಿರ್ವಾಹಣಾ ಪ್ರಾಧಿಕಾರದ ಆದೇಶಗಳು ರೈತರನ್ನು ಮತ್ತಷ್ಟು ಕಂಗೆಡಿಸಿದ್ದವು. ಇದೀಗ ಕೆಆರ್ ಎಸ್ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಕೆಆರ್ ಎಸ್ ಅಣೆಕಟ್ಟೆ ಯಾವುದೇ ಕ್ಷಣದಲ್ಲಾದರೂ ಸಂಪೂರ್ಣ ಭರ್ತಿಯಾಗುವ ಸನಿಹಕ್ಕೆ ಬಂದು ನಿಂತಿದೆ.
ತೀವ್ರ ಬಿಸಿಲಿನ ಬೇಗೆ ಹಾಗೂ ಕೆರೆ-ಕಟ್ಟೆಗಳು ಬರಿದಾಗಿದ್ದರಿಂದ ಜಿಲ್ಲೆಯ ಜನತೆ ಅಲ್ಲಲ್ಲಿ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಉದ್ಭವವಾಗಿತ್ತು. ಅಲ್ಲದೇ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಕಬ್ಬು, ಮಾವು, ಸಪೋಟ, ವೀಳ್ಯದೆಳೆ ಬೆಳೆಗಳು ಕೈಗೆ ಹತ್ತದೇ ರೈತರು ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ಹವಾಮಾನ ಇಲಾಖೆ ಉತ್ತಮ ಮಳೆಯಾಗಲಿದೆ ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ ಕಾವೇರಿ ನದಿ ಪಾತ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅಣೆಕಟ್ಟೆಯ ನೀರಿನ ಮಟ್ಟ ಶನಿವಾರ ರಾತ್ರಿ 8 ಗಂಟೆಯ ವೇಳೆ 121 ಅಡಿ ದಾಟಿದೆ.
ಕೃಷಿ ಚಟುವಟಿಕೆಗೆ ನೀರು ಬಿಡುವ ಸಾಧ್ಯತೆ : ಕೆ.ಆರ್.ಎಸ್ ಜಲಾಶಯದಲ್ಲಿ ನೀರಿನ ಮಟ್ಟ 115 ಅಡಿ ತಲುಪಿದ ನಂತರ ಕೃಷಿ ಚಟುವಟಿಕೆ ಕೈಗೊಳ್ಳಲು ಕಟ್ಟು ಪದ್ಧತಿಯಲ್ಲಿ ನಿರಂತರವಾಗಿ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎನ್.ಚಲುವರಾಯಸ್ವಾಮಿ ಅವರು ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಒಂದು ಬೆಳೆಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಜತೆಗೆ ಕೆಆರ್ ಎಸ್ ಅಣೆಕಟ್ಟೆ ಸಂಪೂರ್ಣ 124.80ಅಡಿ ಭರ್ತಿಯಾದರೆ ರೈತರು ಎರಡು ಬೆಳೆ ಬೆಳೆಯಲು ಸಹಾಯವಾಗುವಂತೆ ಅಣೆಕಟ್ಟೆಯಿಂದ ನೀರು ಹರಿಸುವುದಾಗಿಯೂ ಭರವಸೆ ನೀಡಿದ್ದಾರೆ.
ಹೀಗಾಗಿ ಜಿಲ್ಲೆಯ ರೈತರಲ್ಲಿ ಆಶಾಭಾವನೆ ಮೂಡಿಸಿದ್ದು, ಎಂದಿನಂತೆ ಕೃಷಿ ಚಟುವಟಿಕೆ ಆರಂಭಿಸಲು ರೈತರು ಸಿದ್ಧತೆ ನಡೆಸುತ್ತಿದ್ದಾರೆ.
ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ಹೊರಕ್ಕೆ : ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಕೆಅರ್ ಎಸ್ ಅಣೆಕಟ್ಟೆಯಿಂದ 1 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ಹೊರ ಬೀಡುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನರು ಜಾಗರೂಕತೆ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದ್ದಾರೆ.
ಜುಲೈ ಅಂತ್ಯದಲ್ಲಿ ಸಿಎಂ ಭಾಗಿನ ಸಲ್ಲಿಕೆ : ಕೆಆರ್ ಎಸ್ ಅಣೆಕಟ್ಟೆ ಭರ್ತಿಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ವಿಧಾನ ಸಭಾ ಕಲಾಪ ಮುಗಿದ ಬಳಿಕ ಜುಲೈ ಅಂತ್ಯದೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್ ಎಸ್ ಅಣೆಕಟ್ಟೆಗೆ ಭಾಗಿನ ಸಲ್ಲಿಕೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಈವರೆಗೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಸಮರ್ಪಕವಾಗಿ ಮಳೆ ಬಿದ್ದು ಕೆಆರ್ ಎಸ್ ಅಣೆಕಟ್ಟೆ ಭರ್ತಿಯಾಗುವುದಿಲ್ಲ ಎಂಬ ವಿರೋಧ ಪಕ್ಷದ ನಾಯಕರ ಟೀಕೆಗಳಿಗೆ ವರುಣ ಉತ್ತರ ನೀಡಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ವಾರದಿಂದಿಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಕೆಆರ್ ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ಬಂದು ತಲುಪಿದೆ.
ಕೆಆರ್ ಎಸ್ ನೀರಿನ ವಿವರ : ಕೆಆರ್ ಎಸ್ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹಣೆ ಈ ರೀತಿ ಇದೆ.
ನೀರಿನ ಗರಿಷ್ಢ ಮಟ್ಟ : 124.80ಅಡಿ.
ಇಂದಿನ ನೀರಿನ ಮಟ್ಟ : 121.40ಅಡಿ.
ಒಟ್ಟು ನೀರಿನ ಸಾಮರ್ಥ್ಯ : 49.452 ಟಿಎಂಸಿ.
ಇಂದಿನ ನೀರಿನ ಸಾಮರ್ಥ್ಯ : 44.846 ಟಿಎಂಸಿ.
ಒಳ ಹರಿವು : 60,224 ಕ್ಯೂಸೆಕ್ಸ್.
ಹೊರ ಹರಿವು : 17795 ಕ್ಯೂಸೆಕ್ಸ್ (ಕುಡಿಯುವ ನೀರು ಸೇರಿದಂತೆ).