ಕಾಮಗಾರಿಯ ವಿವರವೂ ಇಲ್ಲ..ಫಲಕವೂ ಇಲ್ಲ:ಇದು NHAI ಕಾಮಗಾರಿ ಕಥೆ!
ಮಂಡ್ಯ: ಮಂಡ್ಯ ನಗರದ ಹೊರವಲಯದ ಅಮರಾವತಿ ಹೋಟೆಲ್ ನಿಂದ ಮಂಡ್ಯ ನಗರದೊಳಗೆ ಹಾದು ಹೋಗುವ ಬೆಂಗಳೂರು ಮೈಸೂರು ರಾಷ್ಟೀಯ ಹೆದ್ದಾರಿಯನ್ನು ಜ್ಯೋತಿ ಇಂಟರ್ ನ್ಯಾಷನಲ್ ವರೆಗೆ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ.
ಸರಿ ಸುಮಾರು ೨೩ಕೋಟಿ ರೂಗಳ ಈ ಯೋಜನೆಯಡಿ ಹೆದ್ದಾರಿ ಮರು ನಿರ್ಮಾಣದ ಜತೆಗೆ ಇಕ್ಕೆಲಗಳ ಪಾದಚಾರಿ ಮಾರ್ಗಗಳನ್ನು ಮರು ನಿರ್ಮಿಸುವುದು.ಹೆದ್ದಾರಿಯೊಳಗಿನ ನಗರದ ವೃತ್ತಗಳನ್ನು ಆಕರ್ಷಣೀಯವಾಗಿ ರೂಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಕಾಮಗಾರಿಯ ಭಾಗವಾಗಿ ಹೆದ್ದಾರಿಯುದ್ದದ ಎರಡು ಇಕ್ಕೆಲದ ಪಾದಚಾರಿ ಮಾರ್ಗದಲ್ಲಿ ಸ್ಥಾಪಿಸಿದ್ದ ಕಾಬೂಲ್ ಕಲ್ಲುಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.
ರಸ್ತೆಯ ಮಧ್ಯೆ ವಿಭಜಕಗಳನ್ನು ಸರಿ ಮಾಡಲಾಗುತ್ತಿದೆ.ಇಷ್ಟೆಲ್ಲ ಕಾಮಗಾರಿ ನಡೆಯುತ್ತಿದ್ದರು ಕಾಮಗಾರಿಯ ಯಾವುದೆ ವಿವರಗಳು ಲಭ್ಯವಾಗಿಲ್ಲ.ಈ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿಯಮಾನುಸಾರ ಕಾಮಗಾರಿಯ ಹೆಸರು.ಕಾಮಗಾರಿಯ ವಿವರ.ಯಾವ ಶೀರ್ಷಿಕೆಯಡಿ ಹಣ ಬಿಡುಗಡೆ ಮಾಡಲಾಗಿದೆ. ಏಜೆನ್ಸಿಯ ವಿವರ.ಕಾಮಗಾರಿಯ ಮುಕ್ತಾಯದ ವಿವರಗಳನ್ನು ಪ್ರಕಟಿಸುವ ಗೋಜಿಗೆ ಹೋಗಿಲ್ಲ.ಈಗಾಗಲೇ ಗ್ಯಾಸ್ ಪೈಪ್ ಲೈನಿಗಾಗಿ ಹೆದ್ದಾರಿಯ ಇಕ್ಕೆಲಗಳನ್ನು ಅಗೆಯಲಾಗಿತ್ತು.ಈಗ ಎರಡನೇ ಬಾರಿಗೆ ಮತ್ತೊಮ್ಮೆ ಅಗೆತ ಶುರುವಾಗಿದೆ.
ಕಾಮಗಾರಿ ಬೇಕಿತ್ತಾ:ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದ ಜತೆಯಲ್ಲಿ ಮಂಡ್ಯ ನಗರದ ಹೊರಭಾಗದಲ್ಲಿ ಬೈಪಾಸ್ ನಿರ್ಮಾಣವಾಗಿದೆ.ಶೇ ೮೦ರಷ್ಟು ವಾಹನಗಳು ಬೈಪಾಸ್ ಮಾರ್ಗ ಹಿಡಿದಿವೆ.ಸ್ಥಳೀಯ ವಾಹನಗಳು ಮಾತ್ರ ಮಂಡ್ಯ ನಗರದೊಳಗಿನ ಹಳೇಯ ಹೆದ್ದಾರಿಯನ್ನು ಆಶ್ರಯಿಸಿವೆ.ಈಗಿರುವಾಗ ಈ ಕಾಮಗಾರಿ ಬೇಕಿತ್ತಾ ಎಂಬ ಪ್ರಶ್ನೆಯು ನಗರದ ನಾಗರೀಕರಲ್ಲಿ ಎದ್ದಿದೆ.ಈಗಾಗಲೇ ಸುಸ್ಥಿತಿಯಲ್ಲಿದ್ದ ಹೆದ್ದಾರಿಯ ಇಕ್ಕೆಲದ ಪಾದಚಾರಿ ಮಾರ್ಗದ ಕಾಬೂಲ್ ಕಲ್ಲುಗಳನ್ನು ತೆರವು ಮಾಡಿ ಅನಗತ್ಯವಾಗಿ ಸರಕಾರಿ ಹಣವನ್ನು ಪೋಲು ಮಾಡಲಾಗುತ್ತಿದೆ ಎಂಬ ಪ್ರತಿಕ್ರಿಯೆಯು ಕೇಳಿ ಬಂದಿದೆ.ಇದೇ ಹಣವನ್ನು ತಾಲೂಕಿನ ಸರಕಾರಿ ಆಸ್ಪತ್ರೆ.ಶಾಲೆಗಳ ಅಭಿವೃದ್ದಿಗೆ ಬಳಸದೆ ದುಂದುವೆಚ್ವ ಮಾಡಲಾಗುತ್ತಿದೆ ಎಂಬ ನಾಗರೀಕರ ಕೂಗಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಉತ್ತರಿಸಬೇಕಿದೆ