ಮಂಡ್ಯ: ಕುಮಾರಸ್ವಾಮಿಯ ಅಬ್ಬರದ ಗೆಲುವು..ಕಂಗಲಾದ ಕಾಂಗ್ರೇಸ್ ಕಾರ್ಯಕರ್ತರು.ವಿಶ್ವಾಸ ತುಂಬದ ಕೈ ನಾಯಕರು
ಭರ್ತಿ ಎರಡು ಲಕ್ಷದ ಎಂಬತ್ತು ಸಾವಿರ ಮತಗಳ ಅಂತರದಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಗೆಲುವು ಕಾಣುತ್ತಿದ್ದಂತೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ತಳಮಳ ಶುರುವಾಗಿದೆ.ಗ್ಯಾರಂಟಿಗಳು ಕೈ ಹಿಡಿಯಲಿಲ್ಲವೆ.ಕಟ್ಟೆಯಲ್ಲಿ ನೀರು ಬಿಡದೆ ಹೋದದು ಕೈಗೆ ಮುಳುವಾಯಿತೆ..ಒಕ್ಕಲಿಗರು ಕೈ ಕೊಟ್ಟರೆ ಹಿಂದುಳಿದವರು ಕೈ ಎತ್ತಿದರೆ ಇಲ್ಲವೆ ಕೈ ನಾಯಕರೆ ಒಳಗೊಳಗೆ ಕುಮಾರಸ್ವಾಮಿಯೊಂದಿಗೆ ಕೈಜೋಡಿಸಿದರೆ? ಹೀಗೆ ನೂರೆಂಟು ಪ್ರಶ್ನೆಗಳು ಕೈ ಕಾರ್ಯಕರ್ತರಲ್ಲಿ ಮೊಳೆತಿದೆ.ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪಕ್ಷದ ನಾಯಕರೊಂದಿಗೆ ಚರ್ಚಿಸುವ ತವಕದಲ್ಲಿದ್ದಾರೆ.
ವರ್ಷದ ಹಿಂದಷ್ಟೆ ಮಂಡ್ಯ ಜಿಲ್ಲೆಯ ಏಳರ ಪೈಕಿ ಆರರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು.ಇದಕ್ಕೆ ತಕ್ಕಂತೆ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿತ್ತು.
ಆದರೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಮತದಾರರ ತೀರ್ಮಾನದ ಅವಲೋಕನ ನಡೆಸುವಲ್ಲಿ ಕೈ ನಾಯಕರು ಹಿಂದೇಟು ಹಾಕುತ್ತಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಧರ್ ನೇತೃತ್ವದಲ್ಲಿ ಸೋಲು ಗೆಲುವಿನ ಮಂಥನದ ಚರ್ಚೆಯೊಂದು ನಡೆದಿದೆಯಾದರೂ ಅದಕ್ಕೆ ಹೆಚ್ಚಿನ ಮಹತ್ವ ಬಂದಿಲ್ಲ.ಇದ್ದುದ್ದರಲ್ಲಿ ಮದ್ದೂರು ಶಾಸಕ ಉದಯ್ ಕದಲೂರು ಸೋಲು ಗೆಲುವಿನ ಕಾರಣಗಳ ಸಭೆ ನಡೆಸಿ ಕಾರ್ಯಕರ್ತರಿಗೆ ಆತ್ಮಸೈರ್ಯ ತುಂಬುವ ಕೆಲಸ ಮಾಡಿದ್ದು ಬಿಟ್ಟರೆ ಲೋಕಸಭಾ ವ್ಯಾಪ್ತಿಯ ಯಾವೊಬ್ಬ ಶಾಸಕರು ಕಾರ್ಯಕರ್ತರ ಅಭಿಪ್ರಾಯ ಕೇಳುವ ಆತ್ಮವಿಶ್ವಾಸ ತುಂಬುವ ಯಾವುದೆ ಸಭೆ ಕಾರ್ಯಕ್ರಮ ನಡೆಸಿಲ್ಲ.ಸ್ವತ ಉಸ್ತುವಾರಿ ಸಚಿವರು ಸಹ ಈ ವಿಷಯದಲ್ಲಿ ಆಸಕ್ತಿ ತೋರಿಲ್ಲ.
ಈ ಸಾರಿಯ ಚುನಾವಣೆಯಲ್ಲಿ ಕೈ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗೆ ಸಾಂಘಿಕವಾಗಿ ದುಡಿದರು ಫಲಿತಾಂಶ ವ್ಯತಿರಿಕ್ತವಾಗಿದೆ.ಮುಂಬರುವ ದಿನಗಳಲ್ಲಿ ಜಿಪಂ ತಾಪಂ ಚುನಾವಣೆಗಳನ್ನು ಎದುರಿಸಲು ಬೇಕಾದ ನೈತಿಕ ಸ್ಥೈರ್ಯ ತುಂಬುವಲ್ಲಿ ಕೈ ನಾಯಕರು ಆಸಕ್ತಿ ತೋರುತ್ತಿಲ್ಲ.ಸ್ವತಃ ಉಸ್ತುವಾರಿ ಸಚಿವರಿಗೆ ಈ ಕುರಿತು ಆಸಕ್ತಿ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕಾಂಗ್ರೇಸ್ ನ ಹಿರಿಯ ಕಾರ್ಯಕರ್ತರೊಬ್ಬರು.
ಕಾರ್ಯಕರ್ತರ ಮಧ್ಯೆ ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ಇನ್ನೊಂದು ವಾದವೂ ಹುಟ್ಟಿಕೊಂಡಿದೆ.ಮೊದಲಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಾಂಡವಪುರದ ಸಿಎಸ್ ಪುಟ್ಟರಾಜು ಮೈತ್ರಿ ಅಭ್ಯರ್ಥಿ ಎನ್ನಲಾಗಿತ್ತು.ಅದಕ್ಕೆ ತಕ್ಕಂತೆ ದುಡ್ಡಿನ ಗಣಿ ಸ್ಟಾರ್ ಚಂದ್ರು ವನ್ನು ಕರೆದುಕೊಂಡು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಇಡೀ ಲೋಕಸಭಾ ಕ್ಷೇತ್ರವನ್ನು ಒಂದು ರೌಂಡು ಗಿರಿಗಿಟ್ಳೇ ತೋರಿಸಿದ್ದರು.ಅಷ್ಟೋತ್ತಿಗೆ ಸ್ಟಾರ್ ಚಂದ್ರು ಎದುರು ಪುಟ್ಟರಾಜು ನಿಂತರೆ ಬೆಳಗ್ಗಿನ ತಿಂಡಿ ವೇಳೆಗೆ ಫಲಿತಾಂಶ ಘೋಷಣೆಯಾಗಿಬಿಡುತ್ತದೆ ಎಂಬುದು ದಳಪತಿಗಳಿಗೆ ಖಚಿತವಾಗಿತ್ತು.ಆಗ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಚಲಾವಣೆಗೆ ಬಿಟ್ಟರು ಅದಕ್ಕೆ ಸ್ವತಃ ನಿಖಿಲ್ ಕುಮಾರಸ್ವಾಮಿ ಸಿದ್ದವಿರಲಿಲ್ಲ.
ಕಡೆಗೆ ಅನಿವಾರ್ಯವಾಗಿ ಕುಮಾರಸ್ವಾಮಿ ಕಣಕಿಳಿದಿರು.ಕುಮಾರಸ್ವಾಮಿಯಂಥ ಹೈಪ್ರೋಫೈಲ್ ಅಭ್ಯರ್ಥಿ ಇದ್ದಾಗ ಚಿತ್ರನಟಿ ರಮ್ಯ ಥರದ ಅಭ್ಯರ್ಥಿಗಳನ್ನು ಕಣಕಿಳಿಸಿದ್ದರೆ ಕುಮಾರಸ್ವಾಮಿ ಮಂಡ್ಯದ ಕಡೇ ಮುಖ ಮಾಡಿಯು ಮಲಗುತ್ತಿರಲಿಲ್ಲ.ಆದರೆ ರಮ್ಯ ಮಂಡ್ಯದಲ್ಲಿ ನಿಂತರೆ ನಮ್ಮ ಪಾಡು ಸೈಡುವಿಂಗಿನಲ್ಲಿ ಇರಬೇಕಾಗುತ್ತದೆಂದು ಸ್ವತ ಕಾಂಗ್ರೆಸ್ ನಾಯಕರು ರಮ್ಯಗೆ ಅವಕಾಶ ನೀಡುವ ಪ್ರಯತ್ನ ಮಾಡದೆ ಸ್ಟಾರ್ ಚಂದ್ರು ಎಂಬ ಅನಾಮಿಕನನ್ನು ಕಣಕಿಳಿಸಿದರು.ಸಾಲದ್ದಕ್ಕೆ ನೀರು ಬಿಡದೆ ಸೋಲನ್ನು ಸರಾಗವಾಗಿಸಿದರು ಎಂಬ ಚರ್ಚೆಯು ಕೈ ಕಾರ್ಯಕರ್ತರ ಮಟ್ಟದಲ್ಲಿ ಸಾಗಿದೆ.
ಜಿಲ್ಲೆಯ ನಾಯಕರಿಗೆ ಕುಮಾರಸ್ವಾಮಿ ಎದುರಿಸುವ ಗಟ್ಸ್ ಚುನಾವಣೆಯುದ್ದಕ್ಕು ತೋರಲಿಲ್ಲ.ಇದೆಲ್ಲ ಕುಮಾರಸ್ವಾಮಿಯ ಗೆಲುವಿಗೆ ರಹದಾರಿಯಾಯಿತು ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್.
ಕಾರ್ಯಕರ್ತರ ಮಟ್ಟದಲ್ಲಿ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರು ಕಾರ್ಯಕರ್ತರೊಂದಿಗೆ ಕುಳಿತು ಅವರ ಅಭಿಪ್ರಾಯ ಕೇಳುವ.ಸೋಲಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಕೈಪಾಳಯದಲ್ಲಿ ಕಾಣುತ್ತಿಲ್ಲ.ಮುಂಬರುವ ದಿನಗಳಲ್ಲಿ ಜಿಪಂ ತಾಪಂ ಹಾಗೂ ನಗರಸಭೆ ಚುನಾವಣೆಗಳು ಎದುರುಗೊಳ್ಳಲಿವೆ.ಈ ಚುನಾವಣೆಗಳಲ್ಲು ಮೈತ್ರಿ ಎಫೆಕ್ಟ್ ಇದ್ದೆ ಇರುತ್ತದೆ.
ಕೈ ಕಾರ್ಯಕರ್ತರ ಪ್ರಶ್ನೆಗಳು ಇನ್ನೆಲ್ಲಿ ತಿರುಗುಬಾಣವಾದೀತು ಎಂದು ಸೋಲಿನ ವಿಮರ್ಶೆಗೆ ಕೈ ನಾಯಕರು ಹಿಂಜರಿಯುತ್ತಿರುವುದು ಭವಿಷ್ಯದಲ್ಲಿ ಕೈಗೆ ಭಾರೀ ಹೊಡೆತ ಕೊಡುವುದು ಖಚಿತ