Sunday, July 14, 2024
spot_img

ಮಂಡ್ಯ:ಗಣಿಗಾರಿಕೆಗೆ ಅನುಮತಿ.ಕಾಂಗ್ರೇಸ್ ಖಂಡನೆ

ಮಂಡ್ಯ : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ದೇವದಾರಿ ಅಭಯಾರಣ್ಯದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸಚಿವರಾದ ನಂತರ ಹಾಕಿದ ಮೊದಲ ಸಹಿ ಪರಿಸರವನ್ನು ನಾಶ ಮಾಡುವ ಗಣಿಗಾರಿಕೆ ಅನುಮತಿ ಕಡತವಾಗಿರುವುದು ಈ ನಾಡಿನ ದೌರ್ಭಾಗ್ಯ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಸೊಂಡೂರು ತಾಲ್ಲೂಕಿನ ಸ್ವಾಮಿಮಲೈ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ್ದು, ಅತ್ಯಂತ ಸೂಕ್ಷ್ಮ ಜೀವಿ ಹಾಗೂ ಪ್ರಾಣಿ ಸಂಕುಲಗಳು ಮತ್ತು ಸಸ್ಯ ಸಂಕುಲಗಳು ಇರುವ ಸೂಕ್ಷ ಪರಿಸರ ಅಭಯಾರಣ್ಯ ಪ್ರದೇಶವಾಗಿದೆ. ಇಂತಹ ಪರಿಸರದಲ್ಲಿ 485.77 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿರುವುದು ಎಲ್ಲಾ ಪರಿಸರವಾದಿಗಳು ಹಾಗೂ ಪರಿಸರ ಪ್ರೇಮಿಗಳಿಗೆ ಖೇಧ ಉಂಟಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ ಸುಮಾರು 99,388 ಬೃಹತ್ ಮರಗಳು, ಜೀವ ಸಂಕುಲಗಳು ಹಾಗೂ ಔಷಧಿ ಸಸ್ಯಗಳ ಮಾರಣ ಹೋಮವಾಗಲಿದೆ. ಜತೆಗೆ ಅಂರ್ತಜಲ ಹಾಗೂ ಭೂ ಕುಸಿತಕ್ಕೆ ಕಾರಣವಾಗಲಿದೆ ಎಂದರು.

ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳು, ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿಯಲ್ಲಿ ಈ ಗಣಿಗಾರಿಕೆ ಯೋಜನೆಗೆ ಅನುಮತಿ ನೀಡದಂತೆ ವಿರೋಧ ವ್ಯಕ್ತಪಡಿಸಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಶಿಫಾರಸ್ಸು ಮಾಡಿದ್ದರು. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 2018ರಲ್ಲಿ ಮುಖ್ಯ ಮಂತ್ರಿಗಳಗಿದ್ದಾಗ, ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿ ಈಗ ಅವರೇ ಅನುಮತಿ ನೀಡಿ, ಈ ಪ್ರದೇಶದಲ್ಲಿ ಸಸಿಗಳನ್ನು ನಡೆಲು ಕಂಪನಿಯು123 ಕೋಟಿ ರೂಪಾಯಿ ಕೊಡಲಿದೆ ಎಂದು ಹೇಳಿದ್ದಾರೆ. 123 ಕೋಟಿ ರೂಪಾಯಿಗಳಲ್ಲ 123 ಲಕ್ಷ ಕೋಟಿ ರೂ. ಖರ್ಚು ಮಾಡಿದರೂ ಮತ್ತೆ ಅದೇ ಪರಿಸರವನ್ನು ಸೃಷ್ಟಿ ಮಾಡಲು ಸಾಧ್ಯವೇ ಎಂದು ಈ ಹಿಂದೆ ಕುದುರೆಮುಖ ಅಭಯಾರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಪರಿಸರ ವಾದಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೇರೆಗೆ ಮಾಡಿದ ಆದೇಶದಲ್ಲಿ – ಎಷ್ಟೇ ಲಕ್ಷ ಕೋಟಿ ಖರ್ಚು ಮಾಡಿದರೂ ಸೃಷ್ಟಿ ಮಾಡಲಾಗದ ಪರಿಸರವನ್ನು ನಾಶ ಮಾಡುವ ಗಣಿಗಾರಿಕೆಯಿಂದ ಎಷ್ಟೇ ಆದಾಯ ಬಂದರೂ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿ ಹಾಗೂ ತಕ್ಷಣವೇ ಗಣಿಗಾರಿಕೆಯನ್ನು ಮುಚ್ಚುವಂತೆ ಆದೇಶ ಮಾಡಿರುವುದನ್ನು ಎಚ್.ಡಿ. ಕುಮಾರಸ್ವಾಮಿ ರವರ ಗಮನಕ್ಕೆ ತರಲು ಬಯಸುತ್ತೇನೆ. ನೀವು ಉದ್ಯೋಗ ಸೃಷ್ಟಿಸುವ ನೆಪವೊಡ್ಡಿ,ಇಂತಹ ಪರಿಸರವನ್ನು ನಾಶ ಮಾಡುವ ಬದಲು ಕರ್ನಾಟಕದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಪುನಾರಂಭ ಮಾಡಿ 3000 ಕುಟುಂಬಗಳಿಗೆ ಅನುಕೂಲ ಮಾಡಿಕೊಡಿ, ಜತೆಗೆ ದೇಶದಾದ್ಯಂತ ಹಲವಾರು ಬೃಹತ್ ಕೈಗಾರಿಕೆಗಳು ಮುಚ್ಚಿ ಹೋಗಿದ್ದು, ಅವುಗಳನ್ನು ಪುನರಾರಂಭ ಮಾಡಿ ಜನರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸಿದರು.

2019ರಿಂದ ಬಂಡವಾಳ ಹೂಡಿಕೆಯನ್ನು ನಿಲ್ಲಿಸಿರುವ ಹಾಗೂ ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳ ಮೇಲೆ ಹೂಡಿರುವ ಬಂಡವಾಳವನ್ನು ಹಿಂಪಡೆಯುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಬದಲಾಯಿಸಿ, ಅಮೆರಿಕ ಮೂಲಕ ಮೈಕ್ರಾನ್ ಕಂಪನಿಗೆ ಒಂದು ಉದ್ಯೋಗ ಸೃಷ್ಟಿಗೆ 3.2 ಕೋಟಿ ಸಹಾಯಧನವನ್ನು ನೀಡುತ್ತಿರುವುದಾಗಿ ನೀವೇ ಹೇಳಿದ್ದೀರಿ. ಇಷ್ಟು ದೊಡ್ಡ ಮಟ್ಟದ ಸಹಾಯಧನವನ್ನು ಮೈಕ್ರಾನ್ ಕಂಪನಿಗೆ ನೀಡಿರುವುದರ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ನೀವೇ ಹೇಳಿ ಎಂದರು.

ಗ್ಯಾರಂಟಿ ಬಗ್ಗೆ ಟೀಕೆ ಸಲ್ಲದು : ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪದೇ ಪದೇ ಬಡವರ ಪರ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಇದರಿಂದ ಆಗಿರುವ ಪ್ರಯೋಜನ ಏನು ಎಂಬುದು ಗೊತ್ತು. ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡುವ ಮೂಲಕ ಬಡವರ ಹಾಗೂ ಮಧ್ಯಮ ವರ್ಗದವರ ವಿರುದ್ದ ಇದ್ದೀರೆಂದು ತೋರಿಸಿದ್ದೀರಿ ಎಂದರು.

ಕರ್ನಾಟಕವು ಜಿ.ಎಸ್.ಟಿ. ತೆರಿಗೆ ನೀಡುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದ್ದು, ಕಳೆದ 05 ವರ್ಷಗಳಲ್ಲಿ ಕರ್ನಾಟಕ್ಕೆ 1,85,000 ಕೋಟಿ ಅನ್ಯಾಯವಾಗಿದ್ದು, ನಿಮ್ಮ ಅಧಿಕಾರ ಹಾಗೂ ಪ್ರಭಾವವನ್ನು ಉಪಯೋಗಿಸಿ, ಅನ್ಯಾಯ ಸರಿಪಡಿಸಿ, ಆಗ ಕರ್ನಾಟಕ ಸರ್ಕಾರವು ಯಾವುದೇ ತೆರಿಗೆಯನ್ನು ಹೆಚ್ಚಿಸದೇ ಬಡವರ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ. ನ್ಯಾಯಯುತವಾಗಿ ಬರಬೇಕಾದ ಬರ ಪರಿಹಾರದ ಹಣಕ್ಕೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದು, ಕರ್ನಾಟಕ್ಕೆ ಬರಬೇಕಾದ ಬರ ಪರಿಹಾರದ ಹಣ ಸುಮಾರು 15000 ಕೋಟಿ ರೂಪಾಯಿಗಳನ್ನು ಕೊಡಿಸಿ, ಅದನ್ನು ಬಿಟ್ಟು, ಗ್ಯಾರಂಟಿ ಯೋಜನೆಗಳಿಗೆ ಅನುಷ್ಠಾನಗೊಳಿಸದಂತೆ ಮಾಡಲು ಕೇಂದ್ರ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಯಾವುದೇ ನ್ಯಾಯಸಮ್ಮತ ಹಣ ಸಿಗದಂತೆ ಹುನ್ನಾರ ಮಾಡಿದರೆ ಮುಂದೆ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಮೈತಿ ಸರ್ಕಾರಕ್ಕೆ ಮುಂದೆ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪು ನಿಮ್ಮ ಪರವಾಗಿ ಅಲ್ಲ, ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದವರು, ಕೇಂದ್ರದಲ್ಲಿ ಮಂತ್ರಿಯಾಗಲೀ ಎಂಬ ಆಶಯದಿಂದ ಗೆಲ್ಲಿಸಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರುದ್ಧವೂ ಅಲ್ಲ, ಗ್ಯಾರಂಟಿ ಯೋಜನೆಗಳ ವಿರುದ್ಧವೂ ಅಲ್ಲ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಸೋಮಶೇಖರ್, ಯೋಗೇಶ್, ನಾಗರತ್ನ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!