ಮಂಡ್ಯ :- ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯ ನಗರದ ಹೊರವಲಯದ ಉಮ್ಮಡಹಳ್ಳಿ ಗೇಟ್ ನ ಸ್ಯಾಂಜೋ ಆಸ್ಪತ್ರೆ ಬಳಿ ನಡೆದಿದೆ.
ಕರ್ನಾಟಕ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದು ಇದರಿಂದ ಬಸ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡಿದ್ದು ಇದರಲ್ಲಿ ಐದಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ತುಮಕೂರಿನಿಂದ – ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹೆದ್ದಾರಿಯಿಂದ ಮಂಡ್ಯ ನಗರಕ್ಕೆ ತೆರಳಲು ಸರ್ವಿಸ್ ರಸ್ತೆಗೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಕ್ಯಾಂಟರ್ ಗೆ ಡಿಕ್ಕಿಯಾಗಿ ಬಸ್ ಉರುಳಿ ಬಿದ್ದಿದೆ.
ಪಲ್ಟಿಯಾದ ಬಸ್ ನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರು ಹಾಗೂ ವಾಹನ ಸವಾರರು ಹೊರ ತೆಗೆದು ಹತ್ತಿರವೇ ಇದ್ದ ಸಾಂಜೋ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಡ್ಯ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಆಗಮಿಸಿ ಉರುಳಿ ಬಿದ್ದಿದ್ದ ಬಸ್ ಅನ್ನು ಕ್ರೇನ್ ಮೂಲಕ ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ