ಮಂಡ್ಯ: ಮಂಡ್ಯದ ಕಾಳೇನಹಳ್ಳಿ ಗ್ರಾಮದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಿ ಸಿ ನರಸಿಂಹ ಗೌಡ ಎಂಬಾತ ಅಕ್ರಮವಾಗಿ ಸ್ಟೋನ್ ಕ್ರಷರ್ ನಡೆಸುತ್ತಿದ್ದಾರೆ ಎಂದು ವಕೀಲ ಕೆ ವಿ ಹೃತಿಕ್ ಗೌಡ ದೂರಿದರು.
ಭಾನುವಾರ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಶರತ್ ಕುಮಾರ್ ಎಂಬುವವರು ಕಾಳೇನಹಳ್ಳಿ ಗ್ರಾಮದ ಸರ್ವೆ. ನಂಬರ್ 30/5 ರಲ್ಲಿ ಕುರಿ ಮತ್ತು ಮೇಕೆ ಫಾರಂ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ನರಸಿಂಹೇಗೌಡ ಎಂಬಾತ ಅಕ್ರಮವಾಗಿ ಸ್ಟೋನ್ ಕ್ರಷರ್ ನಡೆಸುತ್ತಿದ್ದು ಇದರಿಂದ ಬರುವ ಧೂಳಿನಿಂದ ಹಲವಾರು ಮೇಕೆಗಳು ಮೃತಪಟ್ಟಿದೆ ಅಲ್ಲದೆ ಕೃಷಿಗಳ ಮೇಲೆ ಕ್ರಷರ್ ಧೂಳಿನ ಪ್ರಭಾವ ಬೀರಿದ್ದು ಹೈನುಗಾರಿಕೆಗೂ ತೊಂದರೆ ಆಗುತ್ತಿದೆ ಎಂದು ದೂರಿದರು.
ಬೆಳೆಗಳ ಮೇಲೆ ಧೂಳು ಬೀಳುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿದೆ. ಹಸುಗಳಿಗೆ ಮತ್ತು ಕುರಿ ಹಾಗೂ ಮೇಕೆಗಳಿಗೆ ಮೇವು ಸಿಗದೆ ಪ್ರಾಣಿಗಳು ಪರಿತಪಿಸುವಂತೆ ಆಗಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ಕುರಿ ಫಾರಂ ನಡೆಸುತ್ತಿರುವ ಶರತ್ ಕುಮಾರ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು ನ್ಯಾಯಾಲಯವು ಮೇ 18, 2024ರಂದು ಸ್ಟೋನ್ ಕ್ರಷರ್ ನಡೆಸದಂತೆ ತಡೆಯಾಜ್ಞೆ ನೀಡಿದೆ .ಆದರೂ ಕೂಡ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶನಿವಾರದಿಂದ ಕ್ರಶರ್ ನಡೆಸುತ್ತಿದ್ದಾರೆ ಎಂದು ನುಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
ಆದ್ದರಿಂದ ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ವಿನಯ್ ಕುಮಾರ್, ಸಮಾಜಸೇವಕ ವೀರಣ್ಣಗೌಡ, ಶಾಂತ ಕುಮಾರ್ ,ರೈತ ಮುಖಂಡ ವಿಶ್ವ ,ಕುರಿ ಮತ್ತು ಮೇಕೆ ಫಾರಂ ಮಾಲೀಕ ಶರತ್ ಕುಮಾರ್ ಉಪಸ್ಥಿತರಿದ್ದರು.