ಮಂಡ್ಯ : ಭಾರತೀಯ ಜನತಾ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿಎಂ ದ್ಯಾವಪ್ಪ ವಾಗ್ದಾಳಿ ನಡೆಸಿದರು .
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ,ತುರ್ತು ಪರಿಸ್ಥಿತಿ ವಿರೋಧಿಸುವ ನೆಪದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಭಾರತೀಯ ಜನತಾ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹರಿಹಾಯ್ದರು .
ಬಿಜೆಪಿ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರು, ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿರುವುದನ್ನು ಇಡೀ ದೇಶವೇ ನೋಡಿದೆ. ಹಾಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಡಾಕ್ಟರ್ ಇಂದ್ರೇಶ್ ಅವರಿಗೆ ಸಂವಿಧಾನದ ಬಗ್ಗೆ ಮಾತನಾಡಲು ನಾಚಿಕೆ ಆಗಬೇಕು ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹೇರಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಆಪರೇಷನ್ ಕಮಲದ ಹೆಸರಿನಲ್ಲಿ ಬುಡಮೇಲು ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ಉಳಿಸುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಎದುರಿಸಿದೆ ಎಂದು ತಿಳಿಸಿದರು. ಬಿಜೆಪಿ ಮತ್ತು ಜೆಡಿಎಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಒಂದೆಡೆ ಯೋಜನೆಯನ್ನು ನಿಲ್ಲಿಸುತ್ತಾರೆ ಎಂದು ಹೇಳುತ್ತಿದ್ದರೆ ,ಮತ್ತೊಂದೆಡೆ ಯೋಜನೆಯನ್ನು ನಿಲ್ಲಿಸಿ ಎನ್ನುತ್ತಿದ್ದಾರೆ .ಆದರೆ ಬಡವರ ಪರವಾಗಿರುವ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಪತ್ರಕರ್ತರ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅವರು, ಕಳೆದ 10 ವರ್ಷಗಳಿಂದ ಗ್ಯಾಸ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ. ಆದರೆ ಒಂದು ಯೋಜನೆಗೆ ಹಣವನ್ನು ಕ್ರೂಡಿಕರಿಸುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ ಎಂದು ಸಮರ್ಥಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ವಿ ನಾಗರಾಜು ,ರಾಜ್ಯ ಕಾರ್ಯದರ್ಶಿ ಎಂ ಬಿ ಶಕುಂತಲಾ, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಬಿಟಿ ಗುರುರಾಜ್ ,ಡಿಕೆ ಶಿವಕುಮಾರ್ ಸಂಘದ ಜಿಲ್ಲಾಧ್ಯಕ್ಷ ಪಿ ಎನ್ ಸಿದ್ದೇಗೌಡ ,ಕೋಣನಹಳ್ಳಿ ಮಹೇಶ್ ,ಉಮ್ಮಡಹಳ್ಳಿ ನಾಗೇಶ್, ಇನ್ಟೆಕ್ ಜಿಲ್ಲಾಧ್ಯಕ್ಷ ವೈ ಎಂ ನಿಂಗೇಗೌಡ ಉಪಸ್ಥಿತರಿದ್ದರು.