Tuesday, February 18, 2025
spot_img

ಮಂಡ್ಯ:ಸ್ವಾಮಿ ಪೊನ್ನಾಚಿಗೆ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ’ ಜೂ ೦೯ರಂದು ಪ್ರಶಸ್ತಿ ಪ್ರಧಾನ

ಮಂಡ್ಯ:ಜೂ.೦೭. ನಾಡಿನ ಖ್ಯಾತ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಈ ಸಾರಿ ಯುವ ಕಥೆಗಾರ ಸ್ವಾಮಿ ಪೊನ್ನಾಚಿಯವರಿಗೆ ಸಂದಿದೆ ಎಂದು ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಟಾನದ ಅಧ್ಯಕ್ಷ ಎಚ್ ಆರ್ ಸುಜಾತ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕನ್ನಡ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ “ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ” ಯನ್ನು ಆಯಾ ವರ್ಷ ಪ್ರಕಟವಾದ ಕನ್ನಡದ ಒಂದು ಉತ್ತಮ ಸಣ್ಣ ಕಥಾಸಂಕಲನಕ್ಕೆ ನೀಡುತ್ತ ಬಂದಿದ್ದು, ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸಿದೆ. ಇಷ್ಟು ವರ್ಷಗಳಲ್ಲಿ ಪ್ರಶಸ್ತಿಯು ಹಿರಿಯ, ಕಿರಿಯ ಅನೇಕ ಕನ್ನಡದ ಕಥೆಗಾರರಿಗೆ ಸಂದಿದೆ, ಅವರೆಲ್ಲರೂ ಇಂದು ಕನ್ನಡದ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

2023ನೇ ಸಾಲಿನ ಪ್ರಶಸ್ತಿಗೆ ಯುವ ಕಥೆಗಾರ ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಕೃತಿಯು ಆಯ್ಕೆಯಾಗಿದೆ. ಈ ವರ್ಷ ಒಟ್ಟು 33 ಕಥಾ ಸಂಕಲನಗಳು ಆಯ್ಕೆ ಸಮಿತಿಯ ಮುಂದೆ ಬಂದಿದ್ದವು. ಮೂರು ಸುತ್ತುಗಳ ಪರಿಶೀಲನೆಯ ನಂತರ ಅಂತಿಮವಾಗಿ ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಕಥಾಸಂಕಲನವು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದರು.

ಚಾಮರಾಜನಗರದ ಹನೂರು ತಾಲ್ಲೂಕಿನ ಪೊನ್ನಾಚಿ ಹಳ್ಳಿಯಲ್ಲಿ ಜನಿಸಿದ ಸ್ವಾಮಿ ಪೊನ್ನಾಚಿ, ತಮ್ಮ ಮೊದಲ ಕವನ ಸಂಕಲನ ‘ಸಾವೊಂದನು ಬಿಟ್ಟು’ ಕೃತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ, ಬೇಂದ್ರೆ ಗ್ರಂಥ ಬಹುಮಾನ ಹಾಗೂ ಧೂಪದ ಮಕ್ಕಳು(ಕತೆಗಳು) ಕೃತಿಗಾಗಿ ಪಾಪು ಕಥಾ ಪುರಸ್ಕಾರ, ಛಂದ ಪುಸ್ತಕ ಪುರಸ್ಕಾರ, ಶಾ ಬಾಲುರಾವ್ ಪ್ರಶಸ್ತಿ, ಬಸವರಾಜ ಕಟ್ಟೇಮನಿ ಯುವ ಪುರಸ್ಕಾರ, 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿರುತ್ತಾರೆ.

2023ರಲ್ಲಿ ‘ದಾರಿ ತಪ್ಪಿಸುವ ಗಿಡ’ ಕೃತಿ ಪ್ರಕಟವಾಗಿದೆ..
ಇಲ್ಲಿನ ಕಥೆಗಳು ವ್ಯವಸ್ಥೆಯ ಕೇಂದ್ರಗಳಾಚೆಗಿನ ಅಂಚಿನಲ್ಲಿನ ಬದುಕು, ಬವಣೆ ಮತ್ತು ಭವಿತವ್ಯದ ಭರವಸೆಗಳನ್ನು ; ಭಾಷೆ, ನಿರೂಪಣೆಗಳಲ್ಲಿ ಸಹಜತೆ, ಪರಿಸರ ಮತ್ತು ವ್ಯವಸ್ಥೆಗಳೊಂದಿಗಿನ ಶೀತಲ ಸಂಘರ್ಷ – ರಾಜಿಗಳು ವರ್ತಮಾನದ ಬದುಕಿನ ಅನಿವಾರ್ಯತೆಗಳನ್ನು, ಸಂಕಟಗಳನ್ನು ಸೃಜನಶೀಲತೆ ಭಿತ್ತಿಯಲ್ಲಿ ತೋರುತ್ತಿವೆ.

ಹಿರಿಯ ವಿಮರ್ಶಕರಾದ ಆರ್ ಸುನಂದಮ್ಮ, ಲೇಖಕ, ಪ್ರಾಧ್ಯಾಪಕರಾದ ಹರೀಶ್ ಗಂಗಾಧರ್ ಮತ್ತು ನಾಟಕಕಾರರು, ಪ್ರಾಧ್ಯಾಪಕರಾದ ಕೆ ವೈ ನಾರಾಯಣಸ್ವಾಮಿ ಅವರು ಈ ಬಾರಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ‘ದಾರಿ ತಪ್ಪಿಸುವ ಗಿಡ’ ಕೃತಿಯನ್ನು ಕೊಪ್ಪಳದ ‘ವೈಷ್ಣವಿ ಪ್ರಕಾಶನ’ ಸಂಸ್ಥೆಯು ಪ್ರಕಟಿಸಿದೆ.

 

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಡ್ಯ ನಗರದ ‘ಅಂಬೇಡ್ಕರ್ ಭವನ’ದಲ್ಲಿ ದಿನಾಂಕ 09.06.2024 ಭಾನುವಾರದಂದು ಬೆಳಿಗ್ಗೆ ಹತ್ತು ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮವು ಅಂದು ಬೆಳಿಗ್ಗೆ 10.00 ಗಂಟೆಗೆ ಗಾಯಕಿ ಎಂ.ಡಿ. ಪಲ್ಲವಿ ಮತ್ತು ಸಂಗಡಿಗರಿಂದ ಗಾಯನದೊಂದಿಗೆ ಆರಂಭವಾಗಲಿದೆ.

ಹಿರಿಯ ಬರಹಗಾರರಾದ ಕಾಳೇಗೌಡ ನಾಗವಾರ ಅವರು ಪ್ರಶಸ್ತಿ ಪ್ರದಾನ ಮಾಡುವರು, ಹಿರಿಯ ನಾಟಕಕಾರರು, ಕವಿಗಳು ಆದ ಕೋಟಗಾನಹಳ್ಳಿ ರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುವರು. ಪ್ರತಿಷ್ಠಾನದ ಅಧ್ಯಕ್ಷೆ ಎಚ್. ಆರ್. ಸುಜಾತ ಅವರು ಅಧ್ಯಕ್ಷತೆ ವಹಿಸುವರು. ಪ್ರಶಸ್ತಿ ವಿಜೇತ ಕೃತಿಯ ಬಗ್ಗೆ ಆರ್. ಸುನಂದಮ್ಮ ಅವರು ಮಾತನಾಡುವರು. ಪ್ರಶಸ್ತಿ ಪುರಸ್ಕೃತ ಕಥೆಗಾರ ಸ್ವಾಮಿ ಪೊನ್ನಾಚಿ ಮತ್ತು ಪ್ರತಿಷ್ಠಾನದ ಆಜೀವ ಸದಸ್ಯರಾದ ಶ್ರೀಮತಿ ಡಿ.ಪಿ. ರಾಜಮ್ಮ ರಾಜಣ್ಣ ಅವರು ವೇದಿಕೆ ಮೇಲೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣನವರ ಲೇಖನಗಳ ಸಂಕಲನ ‘ಒರೆಗಲ್ಲು’ ಕೃತಿಯ ಮರುಮುದ್ರಣದ ಪ್ರತಿ ಬಿಡುಗಡೆಯಾಗುವುದು.

ಜೊತೆಗೆ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು ಮತ್ತು ಸದಸ್ಯರು, ಜಿಲ್ಲೆಯ ಹಿರಿಯ ಕಿರಿಯ ಬರಹಗಾರರು, ಕಲಾವಿದರು ಕೂಡ ಉಪಸ್ಥಿತರಿರುವರು.

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮತ್ತು ಸಂಕಥನ ಪ್ರಕಾಶನಗಳು ಪ್ರಕಟಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಯುವ ಸಾಹಿತಿ ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!