ಮಂಡ್ಯ: ಹಲಗೂರು ಗ್ರಾಮ ಪಂಚಾಯಿತಿ ಪಿಡಿಓ ಸಿ.ರುದ್ರಯ್ಯ ಅವರು ಹಲವು ಅಕ್ರಮಗಳಲ್ಲಿ ತೊಡಗಿದ್ದು ಅವರ ಅಮಾನತಿಗೆ ಕ್ರಮ ವಹಿಸದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧೋರಣೆ ವಿರೋಧಿಸಿ ಅ.೧೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಸದರಿ ಗ್ರಾ.ಪಂ ಸದಸ್ಯ ಸುರೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಓ ಸಿ.ರುದ್ರಯ್ಯ ವಿರುದ್ಧ ಹಲವು ಅಕ್ರಮಗಳ ಬಗೆಗೆ ದೂರು ದಾಖಲಿಸಿದ್ದು, ಅಕ್ರಮಗಳು ಸಾಭೀತಾದರೂ ಕ್ಷೇತ್ರ ಶಾಸಕರಾಗಲಿ, ಸರ್ಕಾರವಾಗಲಿ ಮುಂದಾಗದ ಕಾರಣ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯಲ್ಲಿ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಲು ನಿರ್ಧರಿಸಿದ್ದೇವೆ ಎಂದರು.
ಸದರಿ ವ್ಯಕ್ತಿಯ ವಿರುದ್ಧ ಇನ್ನಷ್ಟು ಅಕ್ರಮ ಪ್ರಕರಣಗಳಿದ್ದು, ಈ ಪ್ರಕರಣಗಳ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ. ಆದರೂ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೇ ಅದೇ ಪಂಚಾಯಿತಿಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವುದು ಸಾಕ್ಷ್ಯ ನಾಶದ ಹುನ್ನಾರವಾಗಿದೆ. ಇವರ ವಿರುದ್ಧ ದೂರುಗಳು ಹೆಚ್ಚಾದ ಹಿನ್ನಲೆ ಜಿಲ್ಲಾಧಿಕಾರಿಗಳು ಬೇರೆಡೆಗೆ ವರ್ಗ ಮಾಡಿದ್ದರೂ, ಸ್ಥಳೀಯಸಂಸ್ಥೆಗಳ ಒತ್ತಡದ ಮೇರೆಗೆ ಪಿಡಿಓ ಸಿ.ರುದ್ರಯ್ಯ ಅದೇ ಗ್ರಾ.ಪಂಗೆ ಬಂದಿರುವುದು ಅಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಹೈಕೋರ್ಟಿನಲ್ಲೂ ಈ ಸಂಬಂಧ ತನಿಖೆ ಮಾಡುವಂತೆ ಜಿ.ಪಂ ಸಿಇಓಗೆ ಆದೇಶ ನೀಡಿದ್ದರೂ ತನಿಖೆ ಮಾಡಲಾಗುತ್ತಿಲ್ಲ, ಈತನಿಗೆ ಜಿ.ಪಂ ಸಿಇಓ ಅವರೇ ಬೆನ್ನೆಲುಬಾಗಿದ್ದಾರೆ. ಸಿಇಓ ಅವರು ಕ್ರಮ ತೆಗೆದುಕೊಳ್ಳಲು ಅಕ್ಟೋಬರ್ ೩೧ರವರೆಗೆ ಕಾಲಾವಕಾಶವಿದೆ. ಪಿಡಿಓ ಅಕ್ರಮಗಳಿಗೆ ಶಾಸಕರ ಸಹಮತವೂ ಇದೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ,ಎಸ್ಟಿ ಅಧ್ಯಕ್ಷ ಕುಮಾರಸ್ವಾಮಿ.ಜಿ.ವಿ, ದಲಿತ ಮುಖಂಡರಾದ ನಾಗರಾಜಯ, ನಾಗೇಂದ್ರ ಶಾಗ್ಯ, ರವೀಂದ್ರ ಇದ್ದರು.