ಪಾಂಡವಪುರ, ಜುಲೈ ೧೮ : ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಯೋಗ್ಯತೆ ಏನೆಂಬುದು ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಜನತೆಗೆ ತಿಳಿದಿದೆ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದರೂ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹುಡುಕುವ ಜಾಯಮಾನ ಅವರದ್ದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ ಪುಟ್ಟರಾಜುರವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಮ್ಮ ನಾಯಕರಾದ ಚಲುವರಾಯ ಸ್ವಾಮಿಯವರ ವಿರುದ್ಧ ಅನಗತ್ಯ ಟೀಕೆ ಮಾಡುವುದರ ಮೂಲಕ ತಮ್ಮ ಯೋಗ್ಯತೆಯನ್ನು ತೋರ್ಪಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ಪುಟ್ಟರಾಜುರವರು ರಾಜಕೀಯ ಇತಿಹಾಸವನ್ನು ಹೇಳಲು ಹೊರಟಿರುತ್ತಾರೆ. ಇವರು ವಿಧಾನ ಸಭೆ ಚುನಾವಣೆಯಲ್ಲಿ ಸೋತಿದ್ದಾಗ ಲೋಕಸಭೆಗೆ ಅವಕಾಶ ಕಲ್ಪಿಸಿದ್ದು ಇದೇ ಚಲುವರಾಯಸ್ವಾಮಿರವರು ಎಂಬುದನ್ನು ಮರೆಯಬಾರದು ಎಂದರು.
ಉಸ್ತುವಾರಿ ಸಚಿವರಾಗಿ ಕೆಲವೇ ಕೆಲವು ದಿನಗಳು ಕೆಲಸ ಮಾಡಿದಕ್ಕೆ ತಾವು ಮಹಾ-ನಾಯಕರೆಂದು ಬಿಂಬಿಸುವುದು ಹಾಸ್ಯಾಸ್ಪದವಾಗಿದೆ. ಭ್ರಮೆಯಲ್ಲಿ ತೇಲಾಡುತ್ತಿರುವ ಪುಟ್ಟರಾಜು ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿಗೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರನ್ನು ಹೋಲಿಸುವ ಮೂಲಕ ದೈವಾ ಅವಕೃಪೆಗೆ ಒಳಗಾಗಿದ್ದಾರೆ.
ಪುಟ್ಟರಾಜುರವರು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಕುಟುಂಬವನ್ನು ಒಲಿಸಿಕೊಳ್ಳುವುದಕ್ಕೆ ಕಪಟ ನಾಟಕವನ್ನು ಮಾಡುತ್ತಿದ್ದಾರೆ. ಇದನ್ನು ಮೇಲುಕೋಟೆ ಕ್ಷೇತ್ರದ
ಜನ ನಂಬುವ ಸ್ಥಿತಿಯಲಿಲ್ಲ ಎಂಬ ಕಟು ಸತ್ಯ ಪುಟ್ಟರಾಜುರವರಿಗೆ ತಿಳಿದಿಲ್ಲ. ಈಗಾಗಲೇ ಕ್ಷೇತ್ರದ ಮತದಾರರು ಪುಟ್ಟರಾಜುವಿಗೆ ಅಂತಿಮ ಚರಮಗೀತೆ ಬರೆದಿದ್ದಾರೆ. ಜನತಾ ನ್ಯಾಯಾಲಯ ನೀಡಿರುವ ತೀರ್ಪು ಪಾಲಿಸಿ ಮೌನವಾಗಿರಬೇಕು ಎಂದು ಎಚ್ಚರಿಸಿದರು.
ಎಚ್.ಡಿ.ಕುಮಾರಸ್ವಾಮಿಯವರು ಗೆದ್ದ ನಂತರ ಅವರ ವಿಶ್ವಾಸ ಗಳಿಸಲು ಪುಟ್ಟರಾಜುರವರು ಪ್ರಯತ್ನಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ನಾಯಕರುಗಳ ಮನೆ ಬಾಗಿಲು ತಟ್ಟಿದ್ದು ನಾಡಿನ ಜನತೆಗೆ ಗೊತ್ತಿರುವ ವಿಚಾರ. ಕಾವೇರಿ ವಿಚಾರದಲ್ಲಿ ಅಪ್ರಬುದ್ಧತೆಯಿಂದ ಮಾತನಾಡುತ್ತಿರುವ ಪುಟ್ಟರಾಜು ಮೊದಲಿಗೆ ಪ್ರಬುದ್ಧತೆಯನ್ನು ತೋರಲಿ ಎಂದರು.
ಸಿಎಸ್ಪಿ ವಿರುದ್ಧ ಶೀಘ್ರ ತನಿಖೆ: ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ತಾವು ನಡೆಸುತ್ತಿದ್ದ ಕ್ವಾರಿಯಿಂದ ಕೋಟ್ಯಾಂತರ ರೂಪಾಯಿ ರಾಜಧನ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಇದು ಸರ್ಕಾರಕ್ಕೆ ತಿಳಿದಿದೆ. ಈ ಕುರಿತಂತೆ ತನಿಖೆ ಹಂತದಲ್ಲಿದ್ದು, ಪುಟ್ಟರಾಜು ಸರ್ಕಾರಕ್ಕೆ ವಂಚಿಸಿರುವ ಕ್ವಾರಿಯ ಕೋಟ್ಯಾಂತರ ರಾಜಧನವನ್ನು ಶೀಘ್ರ ಕಟ್ಟ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿನಕುರಳಿ ಬಳಿ ಪುಟ್ಟರಾಜು ಆರಂಭಿಸಿರುವ ಶಿಕ್ಷಣ ಸಂಸ್ಥೆಗೆ ಅನುಕೂಲವಾಗುವಂತೆ ಮಾಡಿರುವ ರಸ್ತೆ ಕಾಮಗಾರಿ ಸರ್ಕಾರದ ಕಾಮಗಾರಿ ಎಂಬುದು ಕೂಡ ಜನತೆಗೆ ತಿಳಿದಿದೆ. ಈ ಎಲ್ಲದರ ತನಿಖೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ಎಚ್ ಡಿಕೆಯಿಂದ ಲೋಪ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ವಿಚಾರವಾಗಿ ಕರೆದಿದ್ದ ಸರ್ವಪಕ್ಷದ ಸಭೆಗೆ ಗೈರಾಗುವ ಮೂಲಕ ಸಂಸದ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಲೋಪವನ್ನು ಉಂಟು ಮಾಡಿದ್ದಾರೆ. ಗೋಡಂಬಿ, ದ್ರಾಕ್ಷಿ ತಿನ್ನಕ್ಕೆ ಹೋಗಬೇಕಿತ್ತಾ ಎಂದು ಲಘುವಾಗಿ ಮಾತನಾಡಿದ್ದಾರೆ. ಇದನ್ನು ಜನತೆ ಪಕ್ಷಾತೀತವಾಗಿ ಖಂಡಿಸಿರುತ್ತಾರೆ. ಹೀಗಾಗಿ ಪುಟ್ಟರಾಜುರವರು ವ್ಯಯಕ್ತಿಕ ಟೀಕೆ-ಟಿಪ್ಪಣಿಗಳಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟು ರಚನಾತ್ಮಾಕವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಪುಟ್ಟರಾಜು ಅವರ ಟೀಕೆ-ಟಿಪ್ಪಣಿಗಳಲ್ಲಿ ಸಹಿಸುವುದಿಲ್ಲವೆಂದು ಈ ಮೂಲಕ ಎಚ್ಚರಿಕೆಯನ್ನು ನೀಡುತ್ತೇವೆ ಎಂದ ಅವರು, ಮೊನ್ನೆ ನಡೆದ ಕುಮಾರಸ್ವಾಮಿ ಅಭಿನಂದನೆ ಕಾರ್ಯಕ್ರಮಕ್ಕೆ 50ಸಾವಿರ ಜನರನ್ನು ಕರೆಸುವುದಾಗಿ ಹೇಳಿದ್ದ ಪುಟ್ಟರಾಜು ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಕರೆಸಲು ಸಾಧ್ಯವಾಗಿಲ್ಲ. ಜನರಿಗೆ ಮಾಡಿದ್ದಂತಹ ಬಾಡೂಟ ಉಳಿದದ್ದೆಇದಕ್ಕೆ ಪೂರಕ ಸಾಕ್ಷಿ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಅಧ್ಯಕ್ಷ ಸಿ.ಆರ್.ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಮುಖಂಡರಾದ ಬಿ.ರೇವಣ್ಣ, ಕೊತ್ತತ್ತಿ ರಾಜು,
ಸಿ.ಎಂ.ದ್ಯಾವಪ್ಪ, ವಿಜೇಂದ್ರಮೂರ್ತಿ, ಚಿಕ್ಕಬ್ಯಾಡರಹಳ್ಳಿ ಧರ್ಮಣ್ಣ, ಸಿ.ಎಂ.ಶ್ರೀಕಾಂತ್, ದೊಡ್ಡವೆಂಕಟಯ್ಯ, ಮಹ್ಮದ್ ಹನೀಫ್ (ಪಾಪು), ರಾಜೇಶ್, ಫೈಂಟ್ ಮಹದೇವು, ಶ್ರೀಕಂಠ, ಭರತ್ ಪಟೇಲ್ ಇತರರಿದ್ದರು.