ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಅಕ್ರಮ ; ತನಿಖಾ ಸಮಿತಿ ನೇಮಿಸಿದ ಜಿಲ್ಲಾಧಿಕಾರಿ
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚಿಕಿತ್ಸಾ ಹಾಗೂ ತಪಾಸಣೆಯ ಹಣ ಸಂದಾಯ ಮಾಡುವ ನಗದು ವಿಭಾಗದಲ್ಲಿ ಹಣಕಾಸು ಅಕ್ರಮ ನಡೆದಿರುವ ಬಗ್ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ನಾಗಣ್ಣಗೌಡ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೂವರು ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಉಪ ವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಎಓ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟಿ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಮಂಡ್ಯ ಜಿಲ್ಲಾಸ್ಪತ್ರೆ ನಗದು ವಿಭಾಗದಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿದ್ದು. ಹೊರ ರೋಗಿಗಳ ದಾಖಲು, ತಪಾಸಣೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾವತಿಸುವ ನಗದು ವಿಭಾಗದಲ್ಲಿ ಸಾರ್ವಜನಿಕರಿಂದ ವಾವತಿಸಿಕೊಂಡ ಶುಲ್ಕವನ್ನು ಸರ್ಕಾರಕ್ಕೆ ಜಮೆ ಮಾಡದೆ ಕೆಲವೊಮ್ಮೆ ಶುಲ್ಕವನ್ನು ಮೇಲಾಧಿಕಾರಿಗಳು ರಿಯಾಯಿತಿ ನೀಡಿದಂತೆ ದಾಖಲೆ ಸೃಷ್ಟಿಸಿ ಅಲ್ಲಿನ ಸಿಬ್ಬಂದಿ ವರ್ಗದವರು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಗಂಭೀರ ಸ್ವರೂಪದ ಆರೋಪಗಳ ಬಗ್ಗೆ ದೂರಿನ ಪ್ರತಿಯೊಂದು ಅಂಶಗಳ ಬಗ್ಗೆ ಪರಿಶೀಲಿಸಿ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಕೆ ಮಾಡಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ.
ತನಿಖಾ ಸಮಿತಿಯಲ್ಲಿರುವ ಅಧಿಕಾರಿಗಳು ದೂರು ಮನವಿಯಲ್ಲಿ ನಮೂದಿಸಿರುವ ಪ್ರತಿಯೊಂದು ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ದೂರು ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಸಂಬಂಧ ಪಟ್ಟ ಎಲ್ಲಾ ಅಧಿಕಾರಿ/ನೌಕರರ ವಿಚಾರಣೆಯನ್ನು ನಡೆಸಿ ನಿಮ್ಮ ಸ್ಪಷ್ಟ ಅಭಿಪ್ರಾಯ ಸಹಿತ ವರದಿಯನ್ನು ಹೇಳಿಕೆ ಮತ್ತು ದಾಖಲೆಗಳೊಂದಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.