ಮಂಡ್ಯ: ಮಿಮ್ಸ್‌ನ ಪ್ರಭಾರ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರು ಕರ್ತವ್ಯ ವೇಳೆಯಲ್ಲಿ ಅಧಿಕಾರ ದುರುಪಯೋಗ, ಕರ್ತವ್ಯಲೋಪ ಎಸಗಿದ್ದು, ಅವರನ್ನು ತನಿಖೆಗೆ ಒಳಪಡಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್‍ಸ್‌ನ ರಾಜ್ಯಾಧ್ಯಕ್ಷ ಹೆಚ್.ಜಿ.ಗಂಗರಾಜು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾರ ನಿರ್ದೇಶಕರಾಗಿ ಮಿಮ್ಸ್‌ನಲ್ಲಿ ಅಧಿಕಾರ ವಹಿಸಿರುವ ಡಾ.ನರಸಿಂಹಸ್ವಾಮಿ ಅಧಿಕಾರ ಬಳಸಿಕೊಂಡು ಸರಿಯಾದ ಸಮಯಕ್ಕೆ ಕಛೇರಿಗೆ ಆಗಮಿಸದೇ ಲೋಪವೆಸಗುತ್ತಿದ್ದಾರೆ. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು ಆಗಿರುವ ಇವರ ನಿರ್ಲಕ್ಷ್ಯತನದಿಂದಾಗಿ ವ್ಯಕ್ತಿಯೊಬ್ಬ ಸದರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆಯೂ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಮಿಮ್ಸ್ ಆವರಣದಲ್ಲಿಯೇ ಅಧಿಕಾರಿಗಳಿಗೆ ತಂಗಲು ವಸತಿ ಗೃಹ ನಿರ್ಮಿಸಲಾಗಿದ್ದು, ಇದಕ್ಕೆ ೨೫ ಸಾವಿರ ರೂಗಳಿಗೂ ಹೆಚ್ಚು ಪಾವತಿಮಾಡುವುದನ್ನು ತಪ್ಪಿಸಲು ವಸತಿಗೃಹದಲ್ಲಿ ವಾಸವಿರದೇ ಮೈಸೂರಿನಿಂದ ಮಂಡ್ಯಕ್ಕೆ ಬರುವುದರಿಂದಾಗಿ ಕರ್ತವ್ಯ ಲೋಪವಾಗುತ್ತಿದೆ ಎಂದು ದೂರಿದರು.
ಜಿಲ್ಲಾಡಳಿತ ಕೂಡಲೇ ಇವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಸಮ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಎನ್.ನರಸಿಂಹಮೂರ್ತಿ, ಭಾರತೀಯ ಬುದ್ಧ ಫೌಂಡೇಷನ್‌ನ ಜೆ.ರಾಮಯ್ಯ, ಸಮಸಮಾಜದ ಸದಸ್ಯರಾದ ಚೌದರಿ, ಲೋಕೇಶ್, ಪ್ರದೀಪ್, ಭಾಸ್ಕರ್ ಇದ್ದರು.