ಮಂಡ್ಯ, ಜುಲೈ ೧೨: ಕಳೆದ ಕೆಲವು ದಿನಗಳಿಂದ ಮಂಡ್ಯ ಲೋಕಸಭಾ ಸದಸ್ಯರು, ಕೇಂದ್ರ ಸಚಿವರು ಅನಗತ್ಯವಾಗಿ ಹೇಳಿಕೆಗಳ ಮೂಲಕ ಜಿಲ್ಲಾ ಹಾಗೂ ರಾಜ್ಯದ ಜನತೆಗೆ ಗೊಂದಲ ಮೂಡಿಸುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.
ಮೈಸೂರಿನ ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದು, ಸ್ವತಃ ವಕೀಲರಾಗಿ ಕಾನೂನಿನ ವ್ಯಾಪ್ತಿಯಲ್ಲಿಯೇ 50-50ರ ಅನುಪಾತದಲ್ಲಿ ನಿವೇಶನಗಳ ವಿಚಾರವನ್ನು ಜನತೆಗೆ ನೀಡಿದ್ದಾರೆ. ತತ್ ಸಂಬಂಧವಾಗಿ ಪೂರ್ವಪರ ಯೋಚನೆ ಮಾಡದೆ ವಿರೋಧಪಕ್ಷದ ನಾಯಕರಂತೆ ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಿರುವುದು ವಿಷಾಧನೀಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದಲ್ಲದೇ, ಮುಡಾ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎಳೆದು ತಂದಿರುವುದು ಕೇಂದ್ರ ಸಚಿವರ ಸ್ಥಾನಕ್ಕೆ ಶೋಭೆಯಲ್ಲ. ಸೂಕ್ತ ದಾಖಲೆಗಳನ್ನು ನೀಡುವ ಮೂಲಕ ಆರೋಪ ಮಾಡುವುದು ಒಳಿತು. ಅಲ್ಲದೇ ಸಿಡಿ ವಿಚಾರದಲ್ಲಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಹಾಸನದಲ್ಲಿನ ತಮ್ಮ ಕುಟುಂಬದ ವಿಚಾರಕ್ಕೆ ಸಂಬಂಧ ಕಾನೂನು ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತಿರುವುದು ವಿಷಯಾಂತರ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎಳೆದು ತರುವುದು ಒಕ್ಕಲಿಗರ ಸಮಾಜದಲ್ಲಿ ಬೇರೊಬ್ಬ ಒಕ್ಕಲಿಗರ ಬೆಳವಣಿಗೆಯನ್ನು ಸಹಿಸದ ಮತ್ಸರ ಬುದ್ಧಿಯನ್ನು ಈ ಹೇಳಿಕೆ ತೋರಿಸುತ್ತದೆ ಎಂದರು.
ಬಿಜೆಪಿ ಪಕ್ಷವು ತಮ್ಮ ಸರ್ಕಾರದ ಅವಧಿಯಲ್ಲಿ ಹಲವಾರು ಹಗರಣಗಳಲ್ಲಿ ಮುಡಾ ವಿಚಾರವನ್ನು ಸೇರ್ಪಡೆ ಮಾಡುತ್ತಿರುವುದು ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ನಾವು ಆಗ್ರಹಿಸುತ್ತೇವೆ. ಪರ್ಯಾಯವಾಗಿ ಇವರು ಹೋರಾಟದ ಹಾದಿ ಹಿಡಿದರೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಮನೆ ಮಾತಾಗಿರುವ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಅಗತ್ಯವಿಲ್ಲವೆಂದು ಹೇಳುತ್ತಿರುವ ಇವರ ಪಕ್ಷದ ಮುಖಂಡರಾದ ಲೆಹರ್ ಸಿಂಗ್ ಅವರ ಬಾಯಿ ಮುಚ್ಚಿಸಿ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಜೊತೆಗೆ ಮತ್ತೆ ಮತ್ತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಬಗ್ಗೆ ಇವರ ಅಸೂಯೆ ಬುದ್ದಿಗೆ ನಾವು ಕೂಡ ವಿಷಯಾಧಾರಿತ ಹೋರಾಟವನ್ನು ಪ್ರಾರಂಭಿಸಬೇಕಾಗುತ್ತದೆ. ಈಗಾಗಲೇ ಜನತೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಜನತೆ ಹಾಗೂ ಜಿಲ್ಲೆಯ ಯುವ ಜನತೆ ಮನವಿ ಮಾಡಿರುವ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಮಾದರಿ ಸಚಿವರಾಗಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಈ ರಾಜ್ಯದ ಜನತೆಯಿಂದ ಪಡೆದ ಸಾವಿರಾರು ಅಹವಾಲುಗಳು ಏನಾಗಿವೆ ಎಂಬುದನ್ನು ಕೇಂದ್ರ ಸಚಿವರು ಬಹಿರಂಗಪಡಿಸಬೇಕು. ಜೊತೆಗೆ ಅಧಿಕಾರದ ಅವಧಿಯಲ್ಲಿ ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಿಸದ ಇವರು ಕಾಂಗ್ರೆಸ್ ನಾಯಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸಲ್ಲದು ಎಂದರು.
ಕೇಂದ್ರ ಸಚಿವರು ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನತಾದರ್ಶನ ಮಾಡಿದಾಗ 10ಸಾವಿರ ಅರ್ಜಿಗಳು ಬಂದಿವೆ. ಆದರೆ ಇವರ ಈಗಿನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆಸಿದ ಜನತಾದರ್ಶನದಲ್ಲಿ ಕೇವಲ 3 ಸಾವಿರ ಅರ್ಜಿಗಳು ಬಂದಿವೆ ಎಂದು ನೀವೆ ಸ್ವತಃ ಹೇಳಿದ್ದೀರಿ. ಮೊದಲು ಆ ಸಮಸ್ಯೆಗಳ ಜತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಸವಾಲೆಸೆದರು.
ಪೆಟ್ರೋಲ್, ಡಿಸೇಲ್ ತೆರಿಗೆ ಶುಲ್ಕ ಹೆಚ್ಚಳ ಮಾಡಿದಾಗ ತಾವು ರಾಜ್ಯದ ಜನತೆಗೆ ದಂಗೆ ಏಳುವಂತೆ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಈ ರೀತಿ ಹೇಳಿಕೆಗಳನ್ನು ನೀಡಿರುವ ನೀವು ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗರ ನಾಯಕರೆಂದು ಬಿಂಬಿಸುವ ನೀವು ಸರ್ಕಾರಿ ಕಾರ್ಯಕ್ರಮವಾದ ನಾಡಪ್ರಭು ಕೆಂಪೇಗೌಡರ ಜಯಂತಿಯಂತಹ ಪ್ರಮುಖ ಕಾರ್ಯಕ್ರಮಗಳಿಗೆ ಗೈರು ಹಾಜರಿಯಾಗುವ ಮೂಲಕ ಅಗೌರವ ತೋರಿದ್ದೀರಿ. ಇದನ್ನೂ ಕೂಡ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ತಮಿಳುನಾಡಿಗೆ ನೀರು ಬಿಡುವ ಆದೇಶಕ್ಕೆ ಖಂಡನೆ : ಕಾವೇರಿ ನೀರು ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವುದು ಮರಣ ಶಾಸನವಾಗಿದೆ. ಸಮಿತಿ ತಮಿಳುನಾಡಿಗೆ 19ಟಿಎಂಸಿ ನೀರು ಬಿಡಲು ಆದೇಶಿಸಿರುವುದನ್ನು ಖಂಡಿಸಲಿದ್ದು, ಪ್ರಭಾವಿ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ತಕ್ಷಣವೇ ಈ ತೀರ್ಪು ರದ್ದುಗೊಳಿಸಲು ಮುಂದಾಗಬೇಕು, ಚುನಾವಣೆಯಲ್ಲಿ ಭರವಸೆ ನೀಡಿದಂತೆ ಕಾವೇರಿ ಹಾಗೂ ಮೇಕೆದಾಟು ಸಮಸ್ಯೆ ನಿವಾರಿಸಲಿ ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮೇಲುಕೋಟೆ ಅಧ್ಯಕ್ಷ ಸಿ.ಆರ್.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಇತರರಿದ್ದರು.