,ಮಂಡ್ಯ :ಜೂ ೧೪. ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಜೂ 16 ರಂದು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಮಾಜಿ ಸಂಸದ ಸಿ .ಎಸ್ .ಪುಟ್ಟರಾಜು ತಿಳಿಸಿದರು .
ಶುಕ್ರವಾರ ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ,ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ ಅವರ ಮೇಲೆ ನ್ಯಾಯಾಲಯ ಕಾನೂನಾತ್ಮಕವಾಗಿ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು,
ಈ ಪ್ರಕರಣದ ವಿಚಾರಣೆ ಕಾನೂನಾತ್ಮಕವಾಗಿ ಮುಗಿದ ನಂತರ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದರು.
ಯಡಿಯೂರಪ್ಪ ಅವರು ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀವು ಸಂಸದರನ್ನು ಆಯ್ಕೆ ಮಾಡುತ್ತಿಲ್ಲ.ಬದಲಿಗೆ ಕೇಂದ್ರದ ಪ್ರಭಾವಿ ಸಚಿವರನ್ನು ಗೆಲ್ಲಿಸುತ್ತಿದ್ದೀರಿ.ಹಾಗಾಗಿ ಅತಿ ಹೆಚ್ಚು ಬಹುಮತದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದರು ಎಂದರು.
ಆದಕಾರಣ ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಕುಮಾರಸ್ವಾಮಿಯವರು ಯಡಿಯೂರಪ್ಪನವರ ಲೈಂಗಿಕ ಕಿರುಕುಳದ ಪ್ರಕರಣ ಕಾನೂನಾತ್ಮಕವಾಗಿ ಬಗೆಹರಿದ ನಂತರ ಕಾರ್ಯಕ್ರಮ ಆಯೋಜಿಸಲು ತಿಳಿಸಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು.
ಜೂನ್ 15ರಂದು ಮೂರು ಗಂಟೆಗೆ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಲಿದ್ದಾರೆ. ನಂತರ ನೂತನ ಲೋಕಸಭಾ ಸದಸ್ಯರ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ,ತರುವಾಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.ಅಲ್ಲದೆ ಮಂಡ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದು, ಕಾರ್ಯಕರ್ತರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದರು.
ನಾಳೆ ನೂತನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದ್ದೂರಿನಲ್ಲಿ ಮಾಜಿ ಸಚಿವ ಡಿಸಿ ತಮ್ಮಣ್ಣ ಸ್ವಾಗತಿಸಲಿದ್ದಾರೆ. ಹಾಗೆಯೇ ಹನಕೆರೆ ಗ್ರಾಮದ ಬಳಿ ರಾಮಚಂದ್ರ ಅವರು ಸ್ವಾಗತಿಸಲಿದ್ದು ನಂತರ ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ನೂತನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ಕರೆತರೆಲಾಗುವುದು ಎಂದರು. ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್ ,ಮನ್ಮುಲ್ ರಾಮಚಂದ್ರು ,ನವೀನ್ ಉಪಸ್ಥಿತರಿದ್ದರು.