Thursday, September 19, 2024
spot_img

ರಾಜಕೀಯ ಕಲುಷಿತಗೊಂಡು ಕುಲಗೆಟ್ಟು ಹೋಗಿದೆ:ಪಕ್ಷೇತ್ತರ ಅಭ್ಯರ್ಥಿ ವಾಟಾಳ್ ವಿಷಾದ

ಮಂಡ್ಯ : ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಯಾರಿಗೆ ಹೆದರದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ವಾಟಾಳ್‌ ಪಕ್ಷದ ಅಧ್ಯಕ್ಷ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಹೇಳಿದರು.

ಪ್ರಧಾನಿ, ಮುಖ್ಯಮಂತ್ರಿ, ಸಂಸದ ಶಾಸಕರಿಗೆ ಹೆದರುವ ಅವಶ್ಯಕತೆ ದಕ್ಷಿಣ ಶಿಕ್ಷಕ ಕ್ಷೇತ್ರದ ಮತದಾರರಿಗಿಲ್ಲ. ಸದನದ ಘನತೆ ಎತ್ತಿ ಹಿಡಿಯಲು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮನವಿ ಮಾಡಿದರು.

ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಕಲುಷಿತಗೊಂಡು ಕುಲಗೆಟ್ಟು ಹೋಗಿದೆ, ಚಿಂತಕರ ಚಾವಡಿ ಎಂದು ಮನೆ ಮಾತಾಗಿದ್ದ ವಿಧಾನ ಪರಿಷತ್‌ ತನ್ನ ಗಾಂಭೀರ್ಯ ಕಳೆದುಕೊಂಡಿದೆ. ಪರಿಷತ್‌ಗೆ ತನ್ನದೇ ಆದ ಘನತೆ ಗೌರವವಿದೆ, ಮೇಲ್ಮನೆ ಎಂದಿಗೂ ಕೆಳ ಮನೆಯಾಗಬಾರದು ಎಂದರು.

ಮೇಲ್ಮನೆಯಲ್ಲಿ ಒಳ್ಳೊಳ್ಳೆ ಚಿಂತಕರು, ಆದರ್ಶವಾದಿಗಳು, ಹಿರಿಯರು ಸದಸ್ಯರಾಗಿದ್ದರು, ಸ್ವಾತಂತ್ರ್ಯ ಹೊರಾಟಗಾರರಾಗಿದ್ದ ಕೆ.ಟಿ.ಭಾಷ್ಯಂ ಅವರು ಪರಿಷತ್ತಿನ ಮೊದಲ ಸಭಾಪತಿಯಾಗಿ ಉತ್ತಮವಾಗಿ ಕೆಲಸ ಮಾಡಿದ್ದರು ಎಂದು ತಿಳಿಸಿದರು.

ಪರಿಷತ್ತಿನಲ್ಲಿ ಎಂ.ಪಿ.ಎಲ್‌.ರಾಜು, ಮಲ್ಲರಾಧ್ಯ, ಜಿ.ಎಚ್‌.ವೀರಣ್ಣ, ನಾಟಕಕಾರರ ಗುಬ್ಬಿ ವೀರಣ್ಣ, ಕಲಾವಿದರಾದ ಬಿ.ಜಯಮ್ಮ, ಎಂ.ಸಿ.ಮಹದೇವಸ್ವಾಮಿ ಸೇರಿದಂತೆ ಹಲವಾರು ವಿವಿಧ ಕ್ಷೇತ್ರಗಳ ಸಾಧಕರು ಪ್ರತಿನಿಧಿಸಿದ್ದರು, ಇಂತಹ ಗಾಂಭೀರ್ಯದ ಸದನದಲ್ಲಿ ಈಗ ತಮ್ಮ ಪಕ್ಷದವರು, ನೆಂಟರಿಷ್ಟರು ಅಥವಾ ಉದ್ಯಮಿಗಳನ್ನ ಸದಸ್ಯರನ್ನಾಗಿ ನಾಮಕರಣ ಮಾಡುವಂತಹ ದುಸ್ತಿತಿ ಬಂದೊದಗಿದೆ ಎಂದು ವಿಷಾದಿಸಿದರು.

75 ಸದಸ್ಯ ಬಲವುಳ್ಳ ಪರಿಷತ್ತಿಗೆ ನಾಡಿನ ಮೂಲೆಮೂಲೆಗಳಿಂದ ಸದಸ್ಯರನ್ನ ಎಕ್ಕಿತಂದು ನಾಮಕರಣ ಮಾಡಬೇಕಿತ್ತು, ಕೆಳಮನೆಯ ಸದಸ್ಯರಿಗೆ ಹಾಗಾಗ್ಗೆ ಸಲಹೆ ಸೂಚನೆಗಳನ್ನ ನೀಡುವಂತಹ ಗುರುತರ ಕೆಸಲವನ್ನ ಪರಿಷತ್ತಿನ ಸದಸ್ಯರು ಮಾಡುತ್ತಿದ್ದರು, ಆದರೆ ಇಂದು ಎಲ್ಲವೂ ಕಣ್ಮರೆಯಾಗಿವೆ, ಅದರ ಘನತೆ ಗಾಂಭೀರ್ಯ ಹೊರಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಷತ್ತಿಗೆ ಯಾವುದೇ ಪಕ್ಷದ ಸದಸ್ಯರನ್ನ ನಾಮಕರಣ ಮಾಡಿ ಆದರೆ ಸದಸ್ಯರಾಗಿ ಬರುವವರು ಒಂದಷ್ಟು ವಿಚಾರವಂತರರು, ಚಿಂತಕರು, ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾಗಿದ್ದರೆ ಅದಕ್ಕೊಂದು ಘನತೆ ತಂದುಕೊಡುತ್ತದೆ, ಇಂತಹ ಕೆಲಸವನ್ನು ಪಕ್ಷಾತೀತವಾಗಿ ಮಾಡಬೇಕೆಂದು ಸಲಹೆ ನೀಡಿದರು.

ನಾನು 1967 ರಲ್ಲಿ ಬೆಂಗಳೂರಿನಿಂದ ಆಯ್ಕೆಯಾಗಿದ್ದೆ, ಸದನದಲ್ಲಿ ರಾಜ್ಯಪಾಲರು ಕನ್ನಡದಲ್ಲಿಯೇ ಭಾಷಣ ಮಾಡಬೇಕೆಂದು ಹೋರಾಟ ಮಾಡಿದ್ದೆ, ಅಂದಿನ ರಾಜ್ಯಪಾಲ ಖುರ್ಷಿದ್‌ ಆಲಂಖಾನ್‌ ಹಿಂದಿಯಲ್ಲಿ ಭಾಷಣ ಮಾಡುವಾಗ ಅಡ್ಡಿ ಪಡಿಸಿದ್ದೆ, ತಡೆಯಲಾರದೆ ಅವರು ಹೊರಟು ಹೋದರು, ಇಂದು ಸದನದಲ್ಲಿ ಹಿಂದಿ ಅಥವಾ ಇಂಗ್ಲಿಷ್‌ ಭಾಷಣ ಮಾಡಿದರೆ ಕೇಳುವವರೇ ಇಲ್ಲದಂತಾಗಿದೆ, ಸದನದಲ್ಲಿ ಗೈರಾದರು ಕೇಳುವವರು ಇಲ್ಲ, ನಾನು ಸದನವನ್ನ ಸಂಪೂರ್ಣವಾಗಿ ಹಾಜರಾತಿ ಕಾಯ್ದುಕೊಂಡು ಪ್ರಶಸ್ತಿ ಪಡೆದಿದ್ದೇನೆ ಎಂದರು.

ನನ್ನಂತಹವರು ಪರಿಷತ್ತಿಗೆ ಆಯ್ಕೆ ಆಗಬೇಕು ಹಾಗಾಗಿ ಶಿಕ್ಷಕರ ವೃತ್ತಿ ಪವಿತ್ರವಾದುದು, ಈ ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸಿದ್ದೇನೆ, ಶಿಕ್ಷಕರು ನನಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಯ್ಕೆ ಮಾಡಬೇಕು. ಉತ್ತಮ ಅಭ್ಯರ್ಥಿಯನ್ನ ಆಯ್ಕೆ ಮಾಡುವುದು ಶಿಕ್ಷಕರ ಕರ್ತವ್ಯವೂ ಆಗಿದೆ, ಶಿಕ್ಷಕರಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಶಾಸಕರು, ಸಚಿವರ ವರ್ಗಾವಣೆ ಮಾಡುತ್ತಾರೆಂಬ ಭಯಬೇಡ ನಿಷ್ಪಕ್ಷಪತವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದರು.

ಮುಖಂಡರಾದ ಬೇಕ್ರಿ ರಮೇಶ್‌, ಚಂದ್ರಶೇಖರ್‌, ಜೋಸೆಫ್‌ರಾಮು, ವಿ.ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!