ಮಂಡ್ಯ:ಆ.೧೦.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಡಿ.ಜೆ .ಅಬ್ರಹಾಂ ಅವರು ಸಲ್ಲಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ಲಾಕ್ ಮೇಲರ್ ಡಿಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಮೇಲ್ನೋಟಕ್ಕೆ ಸಾಬೀತಾಗಬಹುದಾದ ಆರೋಪಗಳು ಇಲ್ಲದಿದ್ದರೂ ಅವರು ಕೇಳಿರುವ ಕಾಯ್ದೆ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಕೊಡಲು ಅವಕಾಶವಿಲ್ಲದಿದ್ದರೂ ಒಂದು ದಿನದಲ್ಲಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ದೂರಿದರು.
ಹೆಚ್‍ಡಿ ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾನೂನು ಪ್ರಕಾರ ಗಣಿಗಾರಿಕೆ ಯನ್ನೇ ನಡೆಸದ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಬೋಗಸ್ ಸಂಸ್ಥೆಯ ಮಾಲೀಕ ವಿನೋದ್ ಗೋಯಲ್ ಎಂಬ ವ್ಯಕ್ತಿ ಗೆ ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಬಾವಿ ಹಳ್ಳ ತಿಮ್ಮಪ್ಪನ ಗುಂಡಿ ಎನ್ ಇ ಬಿ ಬ್ಲಾಕ್ ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನಿಯಮ ಮೀರಿ ಅವಕಾಶ ನೀಡಿದ್ದರು.
ಈ ಸಂಬಂಧ ಕರ್ನಾಟಕ ಲೋಕಾಯುಕ್ತವು 2014ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ .ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಮೇಲೆ ಅಕ್ರಮ ಗಣಿಗಾರಿಕೆ ಲೀಸ್ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಐಪಿಸಿ ಕಾಯಿದೆ 420, 409 ,465 ,468 ,120 ಬಿ ಹಾಗೂ 511 ರ ಅಡಿಯಲ್ಲಿ ಕುಮಾರಸ್ವಾಮಿ ಅವರನ್ನು ಪ್ರಾಸಿಕ್ಯೂಷನ್ ಮಾಡಲು ಅನುಮತಿ ನೀಡುವಂತೆ ಲೋಕಾಯುಕ್ತ 2023ರಲ್ಲಿ ಮನವಿ ಸಲ್ಲಿಸಿದೆ ಎಂದು ತಿಳಿಸಿದರು. ಮನವಿ ಸಲ್ಲಿಸಿ 9 ತಿಂಗಳಾದರೂ ರಾಜ್ಯಪಾಲರು ಅನುಮತಿ ನೀಡದೆ ಪಕ್ಷಪಾತಿ ಧೋರಣೆ ಅನುಸರಿಸಿದ್ದಾರೆ. ರಾಜಭವನವನ್ನು ಕೇಂದ್ರದ ಬಿಜೆಪಿ ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ ಎಂದು ದೂರಿದರು.
ರಾಜ್ಯಪಾಲರು ಸಂವಿಧಾನದ ಆಶಯದಂತೆ ನಡೆದುಕೊಂಡಿಲ್ಲ. ಆ ಹುದ್ದೆಯ ಘನತೆ ಗೌರವವನ್ನು ಎತ್ತಿ ಹಿಡಿಯದೆ ಪಕ್ಷಪಾತದಿಂದ ನಡೆದುಕೊಂಡಿದ್ದಾರೆ. ಆದ್ದರಿಂದ ಅವರು ಗೌರವಯುತವಾಗಿ ದೆಹಲಿಗೆ ವಾಪಸ್ ಹೋಗಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ಗೋ ಬ್ಯಾಕ್ ಚಳುವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಅಲ್ಲದೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಪರಮಾಪ್ತ ನಾಗರಾಜಪ್ಪ ಅವರು ಮೈಶುಗರ್ ಕಾರ್ಖಾನೆಯಲ್ಲಿ 121 ಕೋಟಿ ರೂಪಾಯಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಆದರೆ ಜೆಡಿಎಸ್ ಮತ್ತು ಬಿಜೆಪಿ ನಾಯಕರುಗಳ ಭ್ರಷ್ಟಾಚಾರ ಮತ್ತು ಅಕ್ರಮಗಳು ರುಜುವಾತಾಗಿದ್ದರೂ ಯಾವ ನೈತಿಕತೆ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ ಎಲ್ ನಾಗೇಂದ್ರ ,ನಗರಸಭೆ ಸದಸ್ಯ ಶ್ರೀಧರ್ ,ಉಮ್ಮಡಹಳ್ಳಿ ನಾಗೇಶ್ ಸೇರಿದಂತೆ ಇತರರಿದ್ದರು.