Wednesday, November 6, 2024
spot_img

ರಾಜ್ಯ ಸರಕಾರದ ಭೂಮಿ ಅಡಮಾನ ರೈತ ವಿರೋಧಿ :ಭರತ್ ರಾಜ್

*ಭೂಮಿ ಅಡಮಾನ ಅಪಾಯಕಾರಿ ಹಾಗೂ ರೈತ ವಿರೋಧಿ-KPRS ವಿರೋಧ*

ವರಮಾನ ಸಂಗ್ರಹ ಹೆಚ್ಚಳಕ್ಕಾಗಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಕನಿಷ್ಠ 25 ಸಾವಿರ ಎಕರೆ ಜಮೀನನ್ನು ಅಡಮಾನ ಇಡುವ ರಾಜ್ಯ ಸರ್ಕಾರದ ಪ್ರಯತ್ನವು ಅಪಾಯಕಾರಿ ಹಾಗೂ ಗಂಭೀರ ದುಷ್ಪರಿಣಾಮಗಳಿಗೆ ಕಾರಣವಾಗುವಂತಹದ್ದು ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಮಳವಳ್ಳಿ ತಾಲ್ಲೂಕು ಸಮಿತಿ ವಿರೋಧ ವ್ಯಕ್ತಪಡಿಸುತ್ತದೆ. ಎಂದು ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಹಾಗೂ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ತಿಳಿಸಿದ್ದಾರೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಡಮಾನ ಪೈಪ್ ಲೈನ್ ಯೋಜನೆಯ ತದ್ರೂಪವಾಗಿರುವ ಇಂತಹ ಪ್ರಯತ್ನ ಮತ್ತು ಆಲೋಚನೆಗಳು ರಾಜ್ಯದ ಜನರನ್ನು,ವಿಶೇಷವಾಗಿ ರೈತಾಪಿ ಸಮುದಾಯವನ್ನು ಬಲವಂತದ ಭೂ ಸ್ವಾಧೀನದ ಮತ್ತಷ್ಟು ಕಠಿಣ ಕ್ರಮಗಳಿಗೆ ಗುರಿಪಡಿಸಲು ಉತ್ತೇಜಿಸುತ್ತದೆ.

ಇಂತಹ ವಿನಾಶಕಾರಿ ಪ್ರಯತ್ನ ಹಾಗೂ ಆಲೋಚನೆಗಳನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಗ್ರಹಿಸುತ್ತದೆ.

ಕೈಗಾರಿಕಾ ಪ್ರದೇಶಾಭಿವೃದ್ಧಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ವಸತಿ ಬಡಾವಣೆ, ಕೈಗಾರಿಕಾ ಕಾರಿಡಾರ್ ,ಬಿಎಂಐಸಿ ಮುಂತಾದ ಹೆಸರಿನಲ್ಲಿ ಕೆಐಎಡಿಬಿ, ಬಿಡಿಎ, ಬಿಎಂಆರ್ ಡಿ ಎಲ್ ಮುಂತಾದ ಏಜೆನ್ಸಿಗಳ ಮೂಲಕ,ರೈತರನ್ನು ಮೋಸ,ಅನ್ಯಾಯ ಮತ್ತು ಶೋಷಣಾ ಬೆಲೆಗೆ ಗುರಿಪಡಿಸಿ ಸಾವಿರಾರು ಎಕರೆ ಭೂಮಿಗಳನ್ನು ಬಲವಂತವಾಗಿ ಕಿತ್ತುಕೊಂಡು, ಇದೇ ಭೂಮಿಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸಲು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಂತಹ ಕಾರ್ಪೊರೇಟ್ ದಲ್ಲಾಳಿಗಳ ಶಿಪಾರಸ್ಸಿಗೆ ಮಣೆ ಹಾಕುತ್ತಿರುವುದು ಭೂ ಸ್ವಾಧೀನದ ಕರಾಳ ಉದ್ದೇಶದ ಅನಾವರಣವಾಗಿದೆ. ಈ ದುರುದ್ದೇಶವನ್ನು ಮರೆ ಮಾಚಲು ಗ್ಯಾರಂಟಿ ಯೋಜನೆಗಳನ್ನು ನೆಪವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಮಾರಾಟದ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿ ಹಾಗೂ ರಿಯಲ್ ಎಸ್ಟೇಟ್ ದೈತ್ಯ ಕುಳಗಳಿಗೆ ಹಸ್ತಾಂತರಿಸುವುದು ಮತ್ತೇ ಅದೇ ಸಾರ್ವಜನಿಕ ಉದ್ದೇಶ ಮುಂದು ಮಾಡಿ ಮತ್ತಷ್ಟು ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ,ಹೀಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಬೆಲೆ ಬಾಳುವ ಭೂಮಿ ಮಾತ್ರವಲ್ಲ, ಇಡೀ ರಾಜ್ಯದ ಕೃಷಿ ಭೂಮಿಯೇ ಕಣ್ಮರೆಯಾಗುವಂತಹ ದುಸ್ಥಿತಿಯನ್ನು ಉಂಟು ಮಾಡುತ್ತದೆ. ಇದಲ್ಲದೇ ನೂರಾರು ವರ್ಷಗಳಿಂದ ಬಗರ್ ಹುಕಂ ಸಾಗುವಳಿ ಮಾಡುತ್ತಿರುವ ಬಡ ರೈತರ ಸ್ವಾಧೀನದಲ್ಲಿರುವ ಭೂಮಿಗೂ ಕಂಟಕ ಉಂಟು ಮಾಡುತ್ತದೆ. ಇಂತಹ ವಿನಾಶಕಾರಿ ಕ್ರಮಗಳನ್ನು ಜಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಲಾಸಿ ಹಾಗೂ ಐಷಾರಾಮಿ ವಸ್ತು ಮತ್ತು ಸೇವೆಗಳ ಮೇಲೆ ತೆರಿಗೆ ಹೆಚ್ಚಳ, ತೆರಿಗೆ ಸಂಗ್ರಹದಲ್ಲಿ ಸೋರಿಕೆ ತಡೆ, ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ನ್ಯಾಯಯುತ ಪಾಲನ್ನು ಪಡೆಯುವುದು, ರಾಜ್ಯದ ಅಂತರಿಕ ಉತ್ಪಾದನೆಯಯಲ್ಲಿ ಉನ್ನತಿ ಸಾಧಿಸುವಂತಹ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ದಕ್ಷತೆ ಹೆಚ್ಚಿಸುವುದು ಮುಂತಾದ ಕ್ರಮಗಳ ಮೂಲಕ ರಾಜಸ್ವ ಸ್ವೀಕೃತಿ ಹೆಚ್ಚಳವನ್ನು ಗಣನೀಯವಾಗಿ ಸಾಧಿಸಲು ಸಾಧ್ಯ. ಇಂತಹ ಕ್ರಮಗಳನ್ನು ಬಿಟ್ಟು ಲಂಗು ಲಗಾಮಿಲ್ಲದ ರಿಯಲ್ ಎಸ್ಟೇಟ್ ಗೆ ಅವಕಾಶ ನೀಡುವ ಹಾಗೂ ರಾಜ್ಯದ ಕೃಷಿ ಮತ್ತು ರೈತರನ್ನು ದಿವಾಳಿ ಮಾಡುವ ಭೂಮಿ ಅಡಮಾನದ ಪ್ರಯತ್ನ ಆತಂಕಕಾರಿ ಹಾಗೂ ದುರದೃಷ್ಟಕರ
ಕೂಡಲೇ ರಾಜ್ಯ ಸರ್ಕಾರ ಭೂಮಿ ಅಡಮಾನದ ಪ್ರಯತ್ನ ನಿಲ್ಲಿಸಬೇಕು. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ರೈತರ ಬಗರ್ ಹುಕಂ ಸಾಗುವಳಿ ಹಕ್ಕನ್ನು ರಕ್ಷಿಸಿ ಭೂಮಿ ಮಂಜೂರು ಮಾಡಬೇಕು. ಬಲವಂತದ ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಬೃಹತ್ ಪ್ರತಿರೋಧ ಒಡ್ಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!